ನವದೆಹಲಿ: ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಸೇರಿದ್ದ ಭಾರತೀಯ ಮೂಲದ ಮೂಕ ಯುವತಿ ಗೀತಾಳನ್ನು ಕೊನೆಗೂ ತವರಿಗೆ ಸೇರಿಸಿರುವ ಪಾಕಿಸ್ತಾನ, ಇದೀಗ ಭಾರತದ ಜೈಲುವಾಸದಲ್ಲಿರುವ ಪಾಕಿಸ್ತಾನದ 459 ಖೈದಿಗಳ ಬಿಡುಗಡೆಯ ನೀರಿಕ್ಷೆಯಲ್ಲಿದೆ ಎಂಬುದಾಗಿ ಸೋಮವಾರ ತಿಳಿದುಬಂದಿದೆ.
ಈ ಕುರಿತಂತೆ ಮಾತನಾಡಿರುವ ಪಾಕಿಸ್ತಾನದ ಹೈ ಕಮಿಷನರ್ ನ ಮಾಧ್ಯಮ ವಕ್ತಾರ ಮಂಜೂರ್ ಮೆಮನ್ ಅವರು, ಗೀತಾ ಭಾರತಕ್ಕೆ ಸೇರಿರುವ ಕುರಿತಂತೆ ಪಾಕಿಸ್ತಾನದ ಹೈ ಕಮಿಷನರ್ ಅಬ್ದುಲ್ ಬಸಿತ್ ನೇತೃತ್ವದಲ್ಲಿ ಇಂದು ಸಂಜೆ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಪಾಕಿಸ್ತಾನದ ಮಾಧ್ಯಮ ವರ್ಗದವರು ಹಾಗೂ ಇನ್ನಿತರೆ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಆಕಸ್ಮಿಕವಾಗಿ ಹಲವು ವರ್ಷಗಳಿಂದ ಪಾಕಿಸ್ತಾನದಲ್ಲಿದ್ದ ಯುವತಿ ಗೀತಾಳನ್ನು ಇದೀಗ ಪಾಕಿಸ್ತಾನವು ಭಾರತಕ್ಕೆ ಕಳುಹಿಸಿಕೊಟ್ಟಿದೆ. ಇದರಂತೆ ಭಾರತವೂ ಸಹ ತಮ್ಮ ದೇಶದ ಜೈಲಿನಲ್ಲಿರುವ ಪಾಕಿಸ್ತಾನ ಮೂಲದ 459 ಖೈದಿಗಳನ್ನು ಬಿಡುಗಡೆ ಮಾಡಲಿದೆ ಎಂದು ನಾವು ನಂಬಿದ್ದೇವೆ ಎಂದು ಹೇಳಿದ್ದಾರೆ.
7 ರಿಂದ 8 ವರ್ಷದವಳಾಗಿದ್ದಾಗ ಭಾರತೀಯ ಮೂಲದ ಗೀತಾ ಎಂಬ ಬಾಲಕಿ ಆಕಸ್ಮಿಕವಾಗಿ ಸಂಝೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಅನಾಥವಾಗಿ ಪಾಕಿಸ್ತಾನ ತಲುಪಿದ್ದಳು. ಬಾಲಕಿಗೆ ಮೂಕಳಾಗಿದ್ದರಿಂದ ಬಾಲಕಿ ಬಗ್ಗೆ ಯಾರಿಗೂ ಯಾವ ಬಗ್ಗೆಯೂ ಮಾಹಿತಿ ಸಿಕ್ಕಿರಲಿಲ್ಲ. ಹೀಗಾಗಿ ಬಾಲಕಿಯನ್ನು ಪಾಕ್ ನ ಈಧಿ ಫೌಂಡೇಶನ್ ನ ಬಿಲ್ಕ್ವೀಸ್ ಈಧಿ ದತ್ತು ತೆಗೆದುಕೊಂಡಿತ್ತು. ಬಾಲಕಿಗೆ ಈಧಿ ಫೌಂಡೇಶನ್ನೇ ಗೀತಾ ಎಂಬ ಹೆಸರನ್ನಿಟ್ಟಿತ್ತು.
ಕೆಲವು ತಿಂಗಳ ಹಿಂದಯಷ್ಟೇ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಟನೆಯ ಭಜರಂಗಿ ಭಾಯಿಜಾನ್ ಎಂಬ ಸಿನಿಮಾ ಬಿಡುಗಡೆಗೊಳ್ಳುತ್ತಿದ್ದಂತೆ ಗೀತಾ ಯುವತಿಯ ಬಗ್ಗೆ ಹಲವೆಡೆ ಸುದ್ದಿಗಳು ಹರಿದಾಡ ತೊಡಗಿದ್ದವು. ಈ ಬಗ್ಗೆ ಮಾಹಿತಿ ಪಡೆದ ಭಾರತೀಯ ರಾಯಭಾರಿ ಕಚೇರಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿ ಇದೀಗ ಯುವತಿಯನ್ನು ಭಾರತಕ್ಕೆ ಕರೆತಂದಿದೆ. ಇದೀಗ ಈ ಯುವತಿಗೆ 23 ವರ್ಷ.