ನವದೆಹಲಿ: ಗೀತಾ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶದ ಮಗಳಾಗಿದ್ದು, ಭಾರತ-ಪಾಕಿಸ್ತಾನದ ಏಕತೆಯ ಸಂಕೇತವಾಗಿದ್ದಾಳೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಂಗಳವಾರ ಹೇಳಿದ್ದಾರೆ.
ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಹೋಗಿದ್ದ ಭಾರತೀಯ ಮೂಲದ ಗೀತಾ ನಿನ್ನೆಯಷ್ಟೇ ತವರು ಭಾರತಕ್ಕೆ ಬಂದಿಳಿದಿದ್ದಳು. ಇದೀಗ ಗೀತಾ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿದ್ದಾಳೆ. ಗೀತಾ ಭೇಟಿಯಾಗುತ್ತಿದ್ದಂತೆ ಆಕೆಗೆ ಆಶೀರ್ವಾದ ಮಾಡಿದ ಪ್ರಣಬ್ ಮುಖರ್ಜಿಯವರು, ನೀನು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶದ ಮಗಳು. ಎರಡೂ ದೇಶದ ಏಕತೆಯ ಸಂಕೇತ. ನಿನ್ನೆ ಕೂಗು ಹಾಗೂ ಮೊರೆಯನ್ನು ದೇವರು ಕೇಳಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಹೋಗಿದ್ದ ಗೀತಾಳನ್ನು ಹಲವು ವರ್ಷಗಳ ಕಾಲ ಪಾಲನೆ-ಪೋಷಣೆ ಮಾಡಿದ್ದ ಈಧಿ ಫೌಂಡೇಶನ್ ನನ್ನು ಕೊಂಡಾಡಿದ ಅವರು, ಗೀತಾಳನ್ನು ಪೋಷಣೆ ಮಾಡಿದ ಈಧಿ ಫೌಂಡೇಶನ್ ಗೆ ಧನ್ಯವಾದ. ಈಧಿ ಫೌಂಡೇಶನ್ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
7-8 ವರ್ಷದ ಭಾರತೀಯ ಮೂಲದ ಬಾಲಕಿಯೊಬ್ಬಳು 15 ವರ್ಷಗಳ ಹಿಂದೆ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಹೋಗಿದ್ದಳು. ಬಾಲಕಿಯ ಬಗ್ಗೆ ಅಲ್ಲಿದ್ದವರಾರಿಗೂ ಮಾಹಿತಿ ತಿಳಿದಿರಲಿಲ್ಲ. ಕಿವಿ ಕೇಳದ ಹಾಗೂ ಮಾತು ಬಾರದ ಬಾಲಕಿ ತನ್ನ ಬಗ್ಗೆ ಹೇಳಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪಾಕಿಸ್ತಾನದ ಸಮಾಜ ಕಲ್ಯಾಣ ಸಂಸ್ಥೆಯಾಗಿರುವ ಈಧಿ ಸಂಸ್ಥೆಯೊಂದು ಬಾಲಕಿಯನ್ನು ದತ್ತು ಪಡೆದು. ಆಕೆಗೆ ಗೀತಾ ಎಂಬ ಹೆಸರು ನೀಡಿ ಪಾಲನೆ-ಪೋಷಣೆ ಮಾಡಿತ್ತು. ಈದೀಗ ಈ ಗೀತಾಳಿಗೆ 23 ವರ್ಷವಾಗಿದೆ. ಬಾಲಿವುಡ್ ನಲ್ಲಿ ಭಜರಂಗಿ ಭಾಯಿಜಾನ್ ಎಂಬ ಚಿತ್ರವೊಂದು ಕೆಲವು ತಿಂಗಳ ಹಿಂದಷ್ಟೇ ಬಿಡುಗಡೆಗೊಂಡಿತ್ತು. ಇದರಂತೆ ಗೀತಾಳ ಬಗ್ಗೆ ಕೆಲವು ಮಾಹಿತಿಗಳು ಹೊರಬರಲಾರಂಭಿಸಿತ್ತು.
ಗೀತಾ ಬಗ್ಗೆ ಹಲವು ಮಾಧ್ಯಮಗಳಲ್ಲೂ ಸುದ್ದಿ ಪ್ರಕಟವಾಗತೊಡಗಿತು. ಗೀತಾಳ ಸುದ್ದಿ ಇಡೀ ಪ್ರಪಂಚದಾದ್ಯಂತ ಹರಿದಾಡತೊಡಗಿತು. ಇದರಿಂದಾಗಿ ಗೀತಾಳ ಬಗ್ಗೆ ಮಾಹಿತಿ ಪಡೆದ ಭಾರತೀಯ ರಾಯಭಾರಿ ಕಚೇರಿ ಪಾಕಿಸ್ತಾನದೊಂದಿಗೆ ಮಾತುಕತೆ ಹಲವು ದಿನಗಳ ಬಳಿಕ ಗೀತಾಳನ್ನು ನಿನ್ನೆಯಷ್ಟೇ ಭಾರತಕ್ಕೆ ಕರೆ ತಂದಿತ್ತು. ಗೀತಾ ಕೊನೆಗೂ ಇದೀಗ ತನ್ನ ತವರು ಮನೆ ಸೇರಿದ್ದಾಳೆ.