ಪಾಟ್ನಾ: ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣೆಯ 3ನೇ ಹಂತದ ಮತದಾನ ಪ್ರಕ್ರಿಯೆ ಅಂತ್ಯವಾಗಿದ್ದು, ಒಟ್ಟು ಶೇ.53.32ರಷ್ಟು ಮತದಾನವಾಗಿದೆ.
3ನೇ ಹಂತದಲ್ಲಿ ಒಟ್ಟು 50 ಸ್ಥಾನಗಳಿಗೆ ಇಂದು ನಡೆದ ಮತದಾನ ಪ್ರಕ್ರಿಯೆ ಸಂಜೆ 5 ಗಂಟೆಯವರೆಗೂ ನಡೆದಿದ್ದು, ರಾಜಧಾನಿ ಪಾಟ್ನಾ, ವೈಶಾಲಿ, ಸರಣ್, ನಳಂದಾ, ಬಕ್ಸಾರ್ ಮತ್ತು ಭೋಜ್ ಪುರಿ ಜಿಲ್ಲೆಗಳ ಸುಮಾರು 14, 170 ಮತಗಟ್ಟೆಗಳಲ್ಲಿ ಮತದಾನ ಅಂತ್ಯವಾಗಿದೆ. 3ನೇ ಹಂತದಲ್ಲಿ ಒಟ್ಟು 808 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ 71 ಮಂದಿ ಮಹಿಳಾ ಅಭ್ಯರ್ಥಿಗಳಾಗಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರ ಇಬ್ಬರು ಪುತ್ರರಾದ ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರು ಕೂಡ ಕಣದಲ್ಲಿದ್ದು, ಮಹೌ ಮತ್ತು ರಾಘೋಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
2010ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಇದೇ 50 ಕ್ಷೇತ್ರಗಳ ಪೈಕಿ ಜೆಡಿಯು 23 ಸ್ಥಾನಗಳನ್ನು ಗಳಿಸಿದ್ದರೆ, ಬಿಜೆಪಿ 19 ಸ್ಥಾನಗಳಲ್ಲಿ ಜಯಗಳಿಸಿತ್ತು. ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಪಕ್ಷ 8 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.
ಆದರೆ ಈ ಭಾರಿ ಶತಾಯಗತಾಯ ಬಿಹಾರದಲ್ಲಿ ಅಧಿಕಾರ ಹಿಡಯಲೇ ಬೇಕು ಎಂದು ಹವಣಿಸುತ್ತಿರುವ ಎನ್ ಡಿಎ ಮೈತ್ರಿಕೂಟ ಮತ್ತು ಬಿಜೆಪಿಯನ್ನು ಮಣಿಸುವ ಏಕೈಕ ಉದ್ದೇಶದಿಂದ ತಮ್ಮ ವೈರತ್ವ ಮರೆತು ಒಂದಾಗಿರುವ ಕಾಂಗ್ರೆಸ್, ಜೆಡಿಯು ಮತ್ತು ಆರ್ ಜೆಡಿ ಪಕ್ಷಗಳ ಮಹಾಘಟ್ ಬಂಧನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಪ್ರಸ್ತುತ ಈ 50 ಕ್ಷೇತ್ರಗಳಲ್ಲಿ ಮಹಾಘಟಬಂಧನ್ ಮೈತ್ರೀಕೂಟದಿಂದ ಕಾಂಗ್ರೆಸ್ 7 ಕ್ಷೇತ್ರ, ಜೆಡಿಯು 18 ಕ್ಷೇತ್ರ ಮತ್ತು ಆರ್ ಜೆಡಿ 25 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
ಇನ್ನು ಎನ್ ಡಿಎ ಮೈತ್ರೀಕೂಟದಲ್ಲಿರುವ ಬಿಜೆಪಿ ಪಕ್ಷ 34 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಎಲ್ ಜೆಪಿ 10 ಸ್ಥಾನ, ಹಿಂದೂಸ್ಥಾನಿ ಅವಾಮಿ ಮೋರ್ಚಾ 4 ಸ್ಥಾನ ಮತ್ತು ರಾಷ್ಟ್ರೀಯ ಲೋಕ ಸಮತಾ ಪಾರ್ಟಿ 2 ಸ್ಥಾನಗಳಲ್ಲಿ ಸ್ಪರ್ಧಿಸಿವೆ.