ನವದೆಹಲಿ: ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ. ಪ್ರಸಕ್ತ ಸೀಸನ್‍ನಲ್ಲಿ ಪ್ರತಿ ಟನ್ ದರ ರು. 230 ನಿಗದಿಪಡಿಸಲಾಗಿದ್ದು, ಈ ಪೈಕಿ ರು.47.50 ಹಣವನ್ನು ಕಬ್ಬು ಬೆಳೆಗಾರರ ಖಾತೆಗೆ ನೇರವಾಗಿ ಜಮಾ ಮಾಡಬೇಕೆಂಬ ಪ್ರಸ್ತಾವನೆಯನ್ನು ಆಹಾರ ಸಚಿವಾಲಯ ಮುಂದಿಟ್ಟಿದೆ. ಈ ಕುರಿತ ಟಿಪ್ಪಣಿಯನ್ನು ಅಂತರ ಸಚಿವಾಲಯದ ಅಭಿಪ್ರಾಯಕ್ಕೆ ಸಲ್ಲಿಸಿದೆ. ಉಳಿಕೆ ಹಣ ರು.182.50ನ್ನು ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈಗಿನ ನಿಯಮದಂತೆ ಕೇಂದ್ರ ಸರ್ಕಾರ ನಿಗದಿಪಡಿಸುವ ನ್ಯಾಯ ಮತ್ತು ಲಾಭದಾಯಕ ಬೆಲೆ (ಎಫ್ ಆರ್‍ಪಿ)ಯನ್ನು ಸಕ್ಕರೆ ಕಂಪನಿಗಳೇ ಪಾವತಿಸಬೇಕು. ಸಕ್ಕರೆ ಉದ್ಯಮದ ಭವಿಷ್ಯದ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಬ್ಬು ಉತ್ಪಾದನೆ ಆಧರಿತ ಸಬ್ಸಿಡಿ ನೀಡುವ ಪ್ರಸ್ತಾವನೆ ಇರುವ ಸಚಿವ ಸಂಪುಟ ಟಿಪ್ಪಣಿಯನ್ನು ಮುಂದಿಟ್ಟಿದೆ. ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಎಫ್ ಆರ್ ಪಿಯಲ್ಲಿ ಒಂದಷ್ಟು ಹಣವನ್ನು ಬೆಳೆಗಾರರ ಖಾತೆಗೆ ನೇರವಾಗಿ ಜಮಾ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಸಕ್ಕರೆ ಒಂದನ್ನೇ ಉತ್ಪಾದಿಸುವುದಲ್ಲಿ ಎಥನಾಲ್, ವಿದ್ಯುತ್ ಮತ್ತು ಇತರೆ ಉಪ ಉತ್ಪನ್ನಗಳನ್ನು ಉತ್ಪಾದಿಸುವಂತಹ ಕಾರ್ಖಾನೆಗಳಿಗೆ ಕಬ್ಬು ನೀಡಿದ ರೈತರಿಗೆ ಮಾತ್ರ ಈ ಸಬ್ಸಿಡಿಯನ್ನು ಸರ್ಕಾರ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಈ ವರ್ಷ ರು.1,250 ಕೋಟಿ ಸಬ್ಸಿಡಿ ಅಗತ್ಯವಿದ್ದು ಸಕ್ಕರೆ ಅಭಿವೃದ್ಧಿ ನಿಧಿ (ಎಸ್ ಡಿಎಫ್ )ಯಿಂದ ಇದನ್ನು ಪಾವತಿಸಲಾಗುವುದು. ಕಬ್ಬು ಸಾಗಿಸುವ ರೈತರ ಹೆಸರಿನಲ್ಲಿ ಸಕ್ಕರೆ ಕಾರ್ಖಾನೆಗಳೇ ಬ್ಯಾಂಕ್ ಖಾತೆಗಳನ್ನು ತೆರೆಸಬೇಕೆಂದು ಹೇಳಲಾಗಿದೆ. ಕೇಂದ್ರ ಸರ್ಕಾರ ಇದುವರೆಗೂ ಸಕ್ಕರೆ ರಫ್ತಿಗೆ ಸಬ್ಸಿಡಿ ನೀಡುತ್ತಿತ್ತು. ಈ ಕುರಿತು ಹಲವಾರು ದೇಶಗಳು ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ)ಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಚಿವಾಲಯ ಸಬ್ಸಿಡಿಯನ್ನು ನೇರವಾಗಿ ರೈತರಿಗೆ ನೀಡಲು ಮುಂದಾಗಿದೆ. ಉತ್ಪಾದನೆ ಆಧರಿತ ಸಬ್ಸಿಡಿ ಡಬ್ಲ್ಯುಟಿಒ ಷರತ್ತುಗಳಿಗೆ ಹೊಂದಿಕೆಯಾಗಲಿದ್ದು ಇದು ದುಬಾರಿ ಕಬ್ಬಿನಿಂದಾಗಿ ಸಂಕಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಸಕ್ಕರೆ ದಾಸ್ತಾನು ಉಳಿಯದಂತೆ ನೋಡಿಕೊಳ್ಳಲು ಸಾಧ್ಯವಾಗಲಿದೆ ಎಂಬುದುಸಚಿವಾಲಯದ ಯೋಜನೆಯಾಗಿದೆ. 2015-16ನೇ ಸಾಲಿನಲ್ಲಿ 4 ದಶಲಕ್ಷ ಟನ್ ಸಕ್ಕರೆ ರಫ್ತು ಮಾಡಲೇಬೇಕೆಂದು ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಿದೆ. ಆದರೆ ಯಾವುದೇ ನೆರವು ನೀಡದಿದ್ದರಿಂದ ಅವರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಸಹಾಯಧನ ನೀಡುವುದರಿಂದ ನಿರಾಳವಾಗಿದೆ.