ದೇಶ

ದಲಿತ ಮಕ್ಕಳ ದಹನ ಪ್ರಕರಣ: ಮನೆಯೊಳಗೇ ಬೆಂಕಿ ಹತ್ತಿತ್ತು, ಹೊರಗಿನಿಂದ ಅಲ್ಲ ಎಂದ ಫಾರೆನ್ಸಿಕ್ ತಜ್ಞರು

Rashmi Kasaragodu
ಫರಿದಾಬಾದ್: ಕೆಲವು ದಿನಗಳ ಹಿಂದೆ ಇಬ್ಬರು ದಲಿತ ಮಕ್ಕಳು ಸಜೀವ ದಹನವಾದ ಪ್ರಕರಣದ ಬಗ್ಗೆ ಫಾರೆನ್ಸಿಕ್ ತಜ್ಞರು ವರದಿ ಸಲ್ಲಿಸಿದ್ದಾರೆ. ಕೋಣೆಯೊಳಗಿನಿಂದಲೇ ಬೆಂಕಿ ಹತ್ತಿಕೊಂಡ ಕಾರಣ ಮಕ್ಕಳು ಸಜೀವ ದಹನವಾದರು, ಹೊರಗಿನಿಂದ ಯಾರೂ ಮನೆಗೆ ಬೆಂಕಿ ಇಟ್ಟಿಲ್ಲ ಎಂದು ಫಾರೆನ್ಸಿಕ್ ವರದಿಯಲ್ಲಿ ಹೇಳಲಾಗಿದೆ.
ಅದೇ ವೇಳೆ ಬೆಡ್ ಪಕ್ಕದಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿರುವ ಸೀಮೆಎಣ್ಣೆಯ ಪ್ಲಾಸ್ಟಿಕ್ ಬಾಟಲಿ ಮತ್ತು ಕೋಣೆಯ ಕಿಟಕಿ ಪಕ್ಕ ಸುಟ್ಟ ಬೆಂಕಿಕಡ್ಡಿಯನ್ನೂ ಫಾರೆನ್ಸಿಕ್ ತಜ್ಞರು ಪತ್ತೆ ಹಚ್ಚಿದ್ದಾರೆ.
ಫಾರೆನ್ಸಿಕ್ ತಜ್ಞರು ಈ ವಾರಾಂತ್ಯದಲ್ಲಿ ತಮ್ಮ ವರದಿಯನ್ನು ಸಿಬಿಐಗೆ ಸಲ್ಲಿಸುವ ಸಾಧ್ಯತೆ ಇದೆ. 
ಫರಿದಾಬಾದ್‌ನ ಬಲ್ಲಾಭಾಗ್ ಬಳಿಯಿರುವ ಸೋನ್ ಪೆಡ್‌ಗ್ರಾಮದ ದಲಿತರ ಮನೆಯೊಂದಕ್ಕೆ ಬೆಂಕಿ ತಗುಲಿ 2 ಮಕ್ಕಳು ಸಜೀವ ದಹನವಾಗಿದ್ದರು. ಆದರೆ ಊರಿನ ಮೇಲ್ಜಾತಿಯವರ ಗುಂಪೊಂದು ಕಿಟಕಿಯಿಂದ ಬೆಂಕಿ ಇಟ್ಟು ಮಕ್ಕಳನ್ನು ಸಜೀವ ದಹನ ಮಾಡಿದ್ದಾರೆ ಎಂದು ಸಾವಿಗೀಡಾದ ಮಕ್ಕಳ ಅಪ್ಪ ಜಿತೇಂದರ್ ಎಂಬವರು ದೂರು ನೀಡಿದ್ದರು.
ಅಕ್ಟೋಬರ್ 20 ರಂದು ಬೆಳಗಿನ ಜಾವ ಜಿತೇಂದರ್ ಎಂಬ ದಲಿತನ ಮನೆ ಬೆಂಕಿಗಾಹುತಿಯಾಗಿತ್ತು. ಈ ಘಟನೆಯಲ್ಲಿ ಮಕ್ಕಳಾದ ಎರಡೂವರೆ ವರ್ಷದ ವೈಭವ್ ಮತ್ತು 11 ತಿಂಗಳ ದಿವ್ಯಾ ಸಜೀವ ದಹನಗೊಂಡಿದ್ದರು. ಇದಲ್ಲದೆ ಜಿತೇಂದರ್ ಪತ್ನಿ ರೇಖಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.
SCROLL FOR NEXT