ದೇಶ

ಪಕ್ಷ ತೊರೆದ ಅಕಾಲಿ ದಳದ ಬಾದಲ್ ಆಪ್ತನಿಗೆ ಅಖಿಲೇಶ್ ಸರ್ಕಾರದಲ್ಲಿ ಮಂತ್ರಿಗಿರಿ ಪಟ್ಟ

Vishwanath S

ಲಖನೌ: ಅಕಾಲಿ ದಳ ಪಕ್ಷದ ತೊರೆದ ಹಿರಿಯ ಮುಖಂಡ ಬಲವಂತ್ ಸಿಂಗ್ ರಾಮೋವಾಲಿಯಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರ್ಕಾರದಲ್ಲಿ ಮಂತ್ರಿಗಿರಿ ಪಟ್ಟ ದೊರೆಕಿದೆ.

ಬಲವಂತ್ ಸಿಂಗ್ ರಾಮೋವಾಲಿಯ ಅವರು ಈ ಹಿಂದೆ ಕೇಂದ್ರ ಸಚಿವರಾಗಿದ್ದರು. ಅಲ್ಲದೆ ಅಕಾಳಿ ದಳದ ಪ್ರಕಾಶ್ ಸಿಂಗ್ ಬಾದಲ್ ಅವರ ಆಪ್ತರೇನಿಸಿಕೊಂಡಿದ್ದ ಬಾದಲ್ ಇದೀಗ ಅಖಿಲೇಶ್ ಯಾದವ್ ಸರ್ಕಾರ ಸೇರಿದ್ದಾರೆ.

2017ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗಾಗಿ ಅಖಿಲೇಶ್ ಯಾದವ್ ಸರ್ಕಾರ ಸಚಿವ ಸಂಪುಟವನ್ನು ದಿಢೀರ್ ಪುನರ್ ರಚಿಸಿದ್ದು, 12 ಹೊಸ ಮುಖಗಳು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದೆ. 9 ಸಚಿವರಿಗೆ ಬಡ್ತಿ ನೀಡಲಾಗಿದ್ದು, ಅವರಲ್ಲಿ ಕೆಲವರಿಗೆ ಸ್ವತಂತ್ರ ನಿರ್ವಹಣೆ ವಹಿಸಲಾಗಿದೆ. ಮೂವರು ರಾಜ್ಯ ಸಚಿವರಿಗೆ ಸಂಪುಟ ದರ್ಜೆ ಸಚಿವರಾಗಿ, ಎಂಟು ಮಂದಿ ಸ್ವತಂತ್ರ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಮೂಲಕ 21 ಮಂದಿ ಸಚಿವರು ಇಂದು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ರಾಮ್ ನಾಯ್ಕ್ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಸರ್ಕಾರ ಮೊನ್ನೆ ಗುರುವಾರ 8 ಸಚಿವರನ್ನು ವಜಾಗೊಳಿಸಿತ್ತು. ಅವರಲ್ಲಿ ಐವರು ಸಂಪುಟ ದರ್ಜೆ ಮತ್ತು ಮೂವರು ರಾಜ್ಯ ಸಚಿವರಾಗಿದ್ದರು. ಇತರ ಒಂಭತ್ತು ಮಂದಿ ಸಚಿವರ ಖಾತೆಗಳನ್ನು ಬದಲಾವಣೆ ಮಾಡಲಾಗಿತ್ತು. ಸಚಿವ ಸ್ಥಾನ ಕಳೆದುಕೊಂಡವರಲ್ಲಿ ರಾಜಾ ಅರಿದಮನ್ ಸಿಂಗ್ ಮತ್ತು ಶಿವ ಕುಮಾರ್ ಬೆರಿಯಾ ಪ್ರಮುಖರು.

ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಪ್ರಾಮುಖ್ಯತೆ ಮತ್ತು ಜಾತಿಯನ್ನು ನೋಡಿಕೊಂಡು ಅಖಿಲೇಶ್ ಸಂಪುಟ ವಿಸ್ತರಣೆ ಮಾಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಾರೆ.

SCROLL FOR NEXT