ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆಯುತ್ತಿರುವ ಭಾರತೀಯ ಗಡಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಸಾವನ್ನಪ್ಪಿರುವುದಾಗಿ ಬುಧವಾರ ತಿಳಿದುಬಂದಿದೆ.
ಇಂದು ಬೆಳಿಗ್ಗೆ ಸುಮಾರು 7.20ರ ಸುಮಾರಿಗೆ ಬಾರಾಮುಲ್ಲಾದಲ್ಲಿರುವ ಲಡೂರ ಗ್ರಾಮಾಂತರ ಪ್ರದೇಶದ ಬಳಿ ಬಂದ ಉಗ್ರರು ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಗೆ ಯೋಧರು ಪ್ರತ್ಯುತ್ತರ ನೀಡುತ್ತಿದ್ದು, ದಾಳಿಯಲ್ಲಿ ಓರ್ವ ಯೋಧ ಸಾವನ್ನಪ್ಪಿರುವುದ್ದಾನೆಂದು ಹೇಳಲಾಗುತ್ತಿದೆ.
ದಾಳಿ ನಡೆಸಿರುವ ಉಗ್ರರು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಹೇಳಲಾಗುತ್ತಿದ್ದು, ಬಾರಾಮುಲ್ಲಾದ ಕೆಲವು ಪ್ರದೇಶಗಳಲ್ಲಿ ಉಗ್ರರು ಅಡಗಿಕುಳಿತಿರುವುದಾಗಿ ಶಂಕೆ ವ್ಯಕ್ತವಾಗಿದೆ.
ಉಗ್ರರ ದಾಳಿಗೆ ಭಾರತೀಯ ಪಡೆಗಳು ಪ್ರತ್ಯುತ್ತರ ನೀಡಿದ್ದು, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅಡಗಿ ಕುಳಿತಿರುವ ಉಗ್ರರಿಗಾಗಿ ಯೋಧರು ಕಾರ್ಯಾಚರಣೆ ಆರಂಭಿಸಿದ್ದು, ಶೀಘ್ರದಲ್ಲೇ ಉಗ್ರರನ್ನು ಬಂಧಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.