ನವದೆಹಲಿ: ಮಾರಿಷಸ್ ಹಾಗೂ ಸಿಂಗಾಪೂರ್ ನಲ್ಲಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರ ಬ್ಯಾಂಕ್ ಅಕೌಂಟ್ ಗಳನ್ನು ಜಪ್ತಿ ಮಾಡಲು ಅಲ್ಲಿನ ಸರ್ಕಾರಗಳು ನಿರ್ಧರಿಸಿರುವುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಮಾರಿಷಸ್ ಹಾಗೂ ಸಿಂಗಾಪುರ ಸರ್ಕಾರಗಳು ಲಲಿತ್ ಮೋದಿಗೆ ಸೇರಿರುವ ಬ್ಯಾಂಕ್ ಖಾತೆಗಳ ವಿವರ ಪಡೆಯುವ ಪ್ರಕ್ರಿಯೆ ಆರಂಭಿಸಿದ್ದು, ಮನಿ ಲ್ಯಾಂಡರಿಂಗ್ ಆಕ್ಟ್ ನಡಿ ಯಾವ್ಯಾವ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿವೆ.
ಮಾರಿಷಸ್ ಹಾಗೂ ಸಿಂಗಾಪೂರದಲ್ಲಿರುವ ಲಲಿತ್ ಮೋದಿ ಬ್ಯಾಂಕ್ ಖಾತೆಗಳ ಜಪ್ತಿಮಾಡಬೇಕೆಂದು ಜುಲೈನಲ್ಲಿ ಎರಡು ಸರ್ಕಾರಕ್ಕೆ ಭಾರತೀಯ ಅಧಿಕಾರಿಗಳು ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಈ ಎರಡು ದೇಶಗಳ ಬ್ಯಾಂಕ್ ಪ್ರಾಧಿಕಾರಗಳು ಮುಟ್ಟುಗೋಲು ಪ್ರಕ್ರಿಯೆ ಆರಂಭಿಸಿವೆ ಎಂದು ಆಂಗ್ಲ ಪತ್ರಿಕೆ ತಿಳಿಸಿದೆ.
2008ರಿಂದ 2015ರ ನಡುವೆ ಲಲಿತ್ ಮೋದಿ ನಡೆಸಿದ ನಿರ್ಧಿಷ್ಟ ವ್ಯವಹಾರಗಳ ವಿವರವನ್ನು ಎರಡು ದೇಶಗಳ ಸರ್ಕಾರಗಳು ಪಡೆಯುತ್ತಿವೆ. ಮೊದಲ ಭಾರಿಗೆ ಎರಡು ದೇಶಗಳಿಂದ ಲಲಿತ್ ಮೋದಿ ಪ್ರಕರಣ ಸಂಬಂಧ ಧನಾತ್ಮಕ ಪ್ರತಿಕ್ರಿಯೆ ಬರುತ್ತಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.