ದೇಶ

ಮಹಾ ಮೈತ್ರಿ ಭಿನ್ನಾಭಿಪ್ರಾಯ; ಮುಲಾಯಂ ಮನವೊಲಿಸಲು ಶರದ್, ಲಾಲು ವಿಫಲ

Guruprasad Narayana

ನವದೆಹಲಿ: ಜನತಾ ಪರಿವಾರದ ಜೊತೆ ಆಂತರಿಕ ಭಿನ್ನಾಭಿಪ್ರಾಯಗಳನ್ನು ಕಾಂಗ್ರೆಸ್ ಪಕ್ಷ ಕೂಡ ಬದಿಗಿಟ್ಟಿರುವಾಗ, ಈ ಮೈತ್ರಿಯಿಂದ ಸಮಾಜವಾದಿ ಪಕ್ಷ ಹೊರಬರುವುದಾಗಿ ಘೋಷಿಸಿರುವ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರನ್ನು ಮನವೊಲಿಸಲು ಶುಕ್ರವಾರ ಜೆಡಿಯು ಅಧ್ಯಕ್ಷ ಶರದ್ ಯಾದವ್ ಮತ್ತು ಆರ್ ಜೆ ಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಇನ್ನಿಲ್ಲದಂತೆ ಪ್ರಯತ್ನಿಸಿದರೂ, ಮುಲಾಯಂ ಯಾವುದಕ್ಕೂ ಮಣಿದಿಲ್ಲ ಎಂದು ತಿಳಿದುಬಂದಿದೆ.

"ಮಾತು ಮಾತು ಮಾತು" ಎಂದಷ್ಟೇ ಸಭೆಯ ನಂತರ ಹೇಳಿದ ಶರದ್ ಯಾದವ್, ಸಭೆ ಫಲಪ್ರದವಾಗದೆ ಇದ್ದಿದ್ದನ್ನು ಸೂಚಿಸಿದ್ದಾರೆ.

ಮುಲಾಯಂ ಅವರು ತಮ್ಮ ರಾಜಕಾರಣದಲ್ಲಿ ಹಲವಾರು ಯು-ಟರ್ನ್ ಗಳನ್ನು ತೆಗೆದುಕೊಂಡಿದ್ದಾರೆ ಆದರೆ ನಿತೀಶ್ ಕುಮಾರ್ ಕನಸು ಕಂಡಷ್ಟೇ ಜನತಾ ಪರಿವಾರದ ವಿಲೀನ ಅವರ ಕನಸಿನ ಕೂಸಾಗಿತ್ತು ಕೂಡ. ಅಲ್ಲದೆ ನಿತೀಶ್ ಮತ್ತು ಲಾಲು ಮಧ್ಯೆ ಇದ್ದ ಭಿನ್ನಾಭಿಪ್ರಾಯಗಳನ್ನು ಸರಿ ಪಡಿಸಿ ಮಹಾ ಮೈತ್ರಿಗೆ ಸಹಾಯ ಮಾಡಿದವರೇ ಅವರು.

ಆದರೆ ಇದು ಮುಲಾಯಂ ಅವರ ಕುಟುಂಬ ಸದಸ್ಯರ ವಿರೋಧವನ್ನು ಆಕರ್ಷಿಸಿತ್ತು ಎಂದು ತಿಳಿದುಬಂದಿದೆ. ಸಹೋದರ ಶಿವಪಾಲ್ ಯಾದವ್ (ಉತ್ತರಪ್ರದೇಶದ ಸಚಿವ) ಮತ್ತು ದಾಯಾದಿ ರಾಮ್ ಗೋಪಾಲ್ ಯಾದವ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆಳದೆ ಸಿಬಿಐ ಕೇಸುಗಳ ಕೈವಾಡವೂ ಇದರಲ್ಲಿದೆ ಎನ್ನಲಾಗಿದೆ.

ಆದರೆ ಅಧಿಕೃತವಾಗಿ, ಈ ಮೈತ್ರಿ ಕಾಂಗ್ರೆಸ್ ಪಕ್ಷಕ್ಕೆ ೪೦ ಸ್ಥಾನಗಳನ್ನು ನೀಡಿ ಸಮಾಜವಾದಿ ಪಕ್ಷಕ್ಕೆ ಕೇವಲ ೫ ಕ್ಷೇತ್ರಗಳನ್ನು ನೀಡಿದ್ದು ಈ ಮೈತ್ರಿ ಮುರಿಯಲು ಕಾರಣ ಎಂದು ಹೇಳಲಾಗಿದೆ.

ಮುಲಾಯಂ ಸಿಂಗ್ ಯಾದವ್ ಅವರು ಬಿಜೆಪಿ ಗಾಳಕ್ಕೆ ಬೀಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಪ್ರಧಾನಿ ನರೇಂದ್ರ ಮೋದಿ ಅಂಟ್ಟು ಅಮಿತ್ ಷಾ ಅವರನ್ನು ಕಳೆದ ಸೋಮವಾರ ಭೇಟಿಯಾಗಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇದರ ಬಗ್ಗೆ ಪ್ರತಿಕ್ರಿಯಿಸಲು ಶರದ್ ಯಾದವ್ ನಿರಾಕರಿಸಿದ್ದು ಎಲ್ಲ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ ಎಂದಿದ್ದಾರೆ.

SCROLL FOR NEXT