ದೇಶ

ಒಆರ್ ಒಪಿ ವಿವಾದ: ಮಾಜಿ ಸೇನಾ ಸಿಬ್ಬಂದಿಗಳಿಂದ ಪ್ರತಿಭಟನೆ ಮುಂದುವರಿಕೆ

Sumana Upadhyaya

ನವದೆಹಲಿ: 'ಸಮಾನ ಶ್ರೇಣಿ, ಸಮಾನ ಪಿಂಚಣಿ' ಯೋಜನೆ ಜಾರಿಗಾಗಿ ಮಾಜಿ ಸೇನಾ ಸಿಬ್ಬಂದಿಗಳು ತಮ್ಮ ಪ್ರತಿಭಟನೆಯನ್ನು ಸದ್ಯಕ್ಕೆ ನಿಲ್ಲಿಸುವ ಲಕ್ಷಣ ಕಾಣುತ್ತಿಲ್ಲ. ಕೇಂದ್ರ ಸರ್ಕಾರ ನಿನ್ನೆ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದ್ದರೂ ಕೂಡ ತಮ್ಮ  ಬೇಡಿಕೆಯನ್ನು ಸರಿಯಾಗಿ ಈಡೇರಿಸಿಲ್ಲ ಎಂದು ಮಾಜಿ ಸೇನಾ ಸಿಬ್ಬಂದಿಗಳು ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸೈನಿಕ ಸ್ಕತ್ತರ್ ಸಿಂಗ್ ದರಿವಾಲ್ , ಸರ್ಕಾರದ ನಿರ್ಧಾರ ನಮಗೆ ಅಸಮಾಧಾನ ತಂದಿದೆ.ಸರ್ಕಾರ ನಮಗೆ ದ್ರೋಹವೆಸಗಿದೆ. ನಮಗೆ ನೀಡಿದ್ಧ ಭರವಸೆ ಒಂದು. ಆದರೆ ಘೋಷಣೆ ಮಾಡಿದ್ದು ಇನ್ನೊಂದು. ಹಾಗಾಗಿ ನಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ.

ನಿನ್ನೆ ಅಪರಾಹ್ನ 'ಸಮಾನ ಶ್ರೇಣಿ, ಸಮಾನ ಪಿಂಚಣಿ' ಯೋಜನೆಯನ್ನು ಘೋಷಿಸಿದ್ದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಮಾಜಿ ಸೇನಾ ಸಿಬ್ಬಂದಿಗಳ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ವೇತನವನ್ನು ಪರಿಷ್ಕರಿಸಲಾಗುವುದು. ಯೋಜನೆ ಜಾರಿಗಾಗಿ ಓರ್ವ ಸದಸ್ಯರ ನ್ಯಾಯಾಂಗ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದ್ದರು.

ಇದೀಗ ಪಿಂಚಣಿಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಪರಿಶೀಲಿಸಬೇಕೆಂದು, ವಿಆರ್ ಎಸ್ ತೆಗೆದುಕೊಂಡವರಿಗೂ ಯೋಜನೆ ಅನ್ವಯಿಸಬೇಕೆಂದು ಮತ್ತು ಏಕ ಸದಸ್ಯ ನ್ಯಾಯಾಂಗ ಸಮಿತಿಯ ಬದಲಿಗೆ ಮೂವರು ಮಾಜಿ ಸಿಬ್ಬಂದಿಗಳನ್ನು ಒಳಗೊಂಡ ಐವರು ಸದಸ್ಯರ ಸಮಿತಿ ರಚಿಸಬೇಕೆಂದು ಪ್ರತಿಭಟನಾ ನಿರತರು ಒತ್ತಾಯಿಸುತ್ತಿದ್ದಾರೆ. ಒಆರ್ ಒಪಿ ಯೋಜನೆ ಜಾರಿಗೆ 30 ದಿನಗಳ ಗಡುವು ನೀಡಿದ್ದಾರೆ.

ಒಆರ್ ಒಪಿ ಯೋಜನೆಯಿಂದ ಸುಮಾರು 3 ದಶಲಕ್ಷ ಮಂದಿ ರಕ್ಷಣಾ ಪಿಂಚಣಿದಾರರಿಗೆ ಮತ್ತು 6 ಲಕ್ಷ ಮೃತ ಮಾಜಿ ಸೇನಾ ಸಿಬ್ಬಂದಿಗಳ ವಿಧವಾ ಪತ್ನಿಯರಿಗೆ ಸಹಾಯವಾಗಲಿದೆ.
2006ರಲ್ಲಿ ಬಂದ ಆರನೇ ವೇತನಾ ಆಯೋಗದ ನಂತರ ಅದಕ್ಕೆ ಮುಂಚೆ ನಿವೃತ್ತಗೊಂಡ ಸೇನಾ ಸಿಬ್ಬಂದಿಗಳು ಅವರ ಸಮಾನರಾದವರಿಗಿಂತ ಮತ್ತು ಕೆಳ ಹಂತದ ಮಾಜಿ ಸಿಬ್ಬಂದಿಗಿಂತ ಕಡಿಮೆ ವೇತನ ಪಡೆಯುತ್ತಿದ್ದರು. ಉದಾಹರಣೆಗೆ 1995ರಲ್ಲಿ ಮೇಜರ್ ಜನರಲ್ ಹುದ್ದೆಯಲ್ಲಿ ನಿವೃತ್ತಗೊಂಡವರು ಮೂಲ ಪಿಂಚಣಿ 30 ಸಾವಿರದ 350 ರೂಪಾಯಿ ಪಡೆಯುತ್ತಿದ್ದರೆ ಅದೇ ಶ್ರೇಣಿಯಲ್ಲಿ 2006 ನಂತರ ನಿವೃತ್ತಗೊಂಡವರು 38 ಸಾವಿರದ 500 ರೂಪಾಯಿ ವೇತನ ಪಡೆಯುತ್ತಾರೆ. ಪಿಂಚಣಿಯಲ್ಲಿ ಈ ವ್ಯತ್ಯಾಸವಿರಬಾರದು ಎಂಬುದು ಮಾಜಿ ಸೇನಾ ಸಿಬ್ಬಂದಿಗಳ ಬೇಡಿಕೆಯಾಗಿತ್ತು.

SCROLL FOR NEXT