ನವದೆಹಲಿ: ತೈಲ ಸ್ಮಗ್ಲರ್ ಗಳನ್ನು ಗುರಿಯಾಗಿರಿಸಿಕೊಂಡು ಸೌದಿ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 20 ಭಾರತೀಯರು ಸಾವನ್ನಪ್ಪಿದ್ದಾರೆ ಎಂಬ ವರದಿ ಸತ್ಯಕ್ಕೆ ದೂರವಾಗಿದೆ. ಬೋಟ್ ಗಳಲ್ಲಿದ್ದ 20 ಮಂದಿ ಭಾರತೀಯರಲ್ಲಿ 13 ಮಂದಿ ಜೀವಂತವಾಗಿದ್ದು, 7 ಜನರು ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಸ್ಪಷ್ಟಪಡಿಸಿದೆ.
ಮಂಗಳವಾರ ಯೆಮೆನ್ ನಲ್ಲಿ ಸೌದಿ ಸೇನೆ ವೈಮಾನಿಕ ದಾಳಿ ನಡೆಸಿದ್ದು, ಅದರಲ್ಲಿ 20 ಭಾರತೀಯರು ಬಲಿಯಾಗಿದ್ದಾರೆ ಎಂಬ ವರದಿಯನ್ನು ಗಮನಿಸಿದ್ದೇವೆ. ಈಗಾಗಲೇ ಡಿಜಿಬೌಟಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಜೊತೆ ಸಂಪರ್ಕದಲ್ಲಿದ್ದು, ಎರಡು ಬೋಟ್ ಗಳಲ್ಲಿ 20 ಭಾರತೀಯರು ತೆರಳುತ್ತಿದ್ದು, ಅವರಲ್ಲಿ 13 ಮಂದಿ ಸುರಕ್ಷಿತರಾಗಿದ್ದಾರೆ, 7 ಜನರು ನಾಪತ್ತೆಯಾಗಿರುವುದಾಗಿ ವಿವರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಭಾರತೀಯ ಪ್ರಜೆಗಳ ಗುರುತಿನ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಂತರ್ಯುದ್ಧ ಪೀಡಿತ ಯೆಮೆನ್‌ನಲ್ಲಿ ಹುತಿ ಬಂಡು ಕೋರರು ಮತ್ತು ಸೌದಿಯಲ್ಲಿ ಆಶ್ರಯ ಪಡೆದಿರುವ ಯೆಮೆನ್ ಅಧ್ಯಕ್ಷ ಅಬೆದ್ರಬ್ಬೊ ಹದಿ ಅವರ ನಿಷ್ಠ ಪಡೆಗಳ ನಡುವೆ ಕಳೆದೊಂದು ವರ್ಷದಿಂದ ಕಾಳಗ ನಡೆದಿದೆ.
ಅಂತರ್ಯುದ್ಧ ಪೀಡಿತ ಯೆಮೆನ್ ನಿಂದ ಸುಮಾರು 5 ಸಾವಿರ ಭಾರತೀಯರನ್ನು ಭಾರತ ಸರ್ಕಾರ ತೆರವುಗೊಳಿಸಿತ್ತು. ಆದರೂ ಭಾರತ ಸರ್ಕಾರದ ಮನವಿ ಆಲಿಸದೇ ಹಲ ಭಾರತೀಯರು ಯೆಮೆನ್‌ನಲ್ಲೇ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics