ಇಸ್ಲಾಮಾಬಾದ್/ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವಿನ ಮಾತುಕತೆ ಮುರಿದು ಬಿದ್ದ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳ ಗಡಿ ರಕ್ಷಣಾ ಪಡೆಗಳ ಮುಖ್ಯಸ್ಥರ 2 ದಿನಗಳ ಸಭೆ ದೆಹಲಿಯಲ್ಲಿ ಆರಂಭವಾಗಿದೆ.
ಮೊದಲ ದಿನದ ಸಭೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ಮೊರೆತ ಕೇಳಬಾರದು. ಶಾಂತಿ ನೆಲೆಸಬೇಕು ಎಂಬ ಅಂಶಗಳಲ್ಲಿ ಉಭಯ ಕಡೆಗಳು ಒಪ್ಪಿಕೊಂಡಿವೆ. ಜತೆಗೆ ಮುಂದಿನ ದಿನಗಳಲ್ಲಿ ಸೌಹಾರ್ದಯುತ ವಾತಾವರಣ ಕಾಪಾಡಿಕೊಂಡು ಬರಲು ನಿರ್ಧರಿಸಲಾಗಿದೆ.
ಶುಕ್ರವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಜತೆ ಪಾಕ್ ತಂಡದ ಸದಸ್ಯರು ಭೇಟಿಯಾಗಲಿದ್ದಾರೆ. ಇದೇ ವೇಳೆ, ಭಾರತದ ಬಳಿ 2 ಸಾವಿರ ಅಣ್ವಸ್ತ್ರ ಸಿಡಿತಲೆಗಳಿವೆ ಎಂದು ಪಾಕಿಸ್ತಾನದ ಮಾಧ್ಯಮಗಳು ಅಂದಾಜು ಮಾಡಿವೆ. ಪಾಕಿಸ್ತಾನದ ವ್ಯೂಹಾತ್ಮಕ ವಿಚಾರಗಳ ಬಗ್ಗೆ ಪರಮಾಧಿಕಾರತ್ವ ಹೊಂದಿರುವ ನ್ಯಾಷನಲ್ ಕಮಾಂಡ್ ಅಥಾರಿಟಿ(ಎನ್‍ಸಿಎ) ಭಾರತ ವೇಗವಾಗಿ ಅಣ್ವಸ್ತ್ರಗಳನ್ನು ಅಭಿವೃದ್ಧಿ ಮಾಡುತ್ತಿದೆ. ಇದು ಪ್ರಾದೇಶಿಕ ಭದ್ರತೆಗೆ ತೊಂದರೆ ತರುತ್ತದೆ ಎಂದು ಅದು ಪ್ರತಿಪಾದಿಸಿದೆ.