ನವದೆಹಲಿ: ನಿವೃತ್ತ ಯೋಧರ ಬಳಿಕ ಈಗ ಪೊಲೀಸರೂ ಸಮಾನ ಹುದ್ದೆ, ಸಮಾನ ಪಿಂಚಣಿಯ ಹಿಂದೆ ಬಿದ್ದಿದ್ದಾರೆ.
ನಿವೃತ್ತ ಸೇನಾನಿಗಳಿಗೆ ನೀಡಿದಂತೆ ನಮಗೂ ಈ ಯೋಜನೆ ಸಮಾನ ಹುದ್ದೆ, ಸಮಾನ ಪಿಂಚಣಿ ನೀಡಬೇಕು ಎಂದು ಏಳನೇ ವೇತನ ಆಯೋಗದ ಮುಂದೆ ಪೊಲೀಸರು ಕೇಳಿಕೊಂಡಿದ್ದಾರೆ. 2006ರಲ್ಲಿ ನಿವೃತ್ತರಾದ ಪೊಲೀಸರು 2006ರಲ್ಲಿ ನಿವೃತ್ತರಾದ ಜೂನಿಯರ್ ಅಧಿಕಾರಿಗಳಿಗಿಂತ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ. ಹಾಗಾಗಿ ಒಆರ್‍ಒಪಿ ಯೋಜನೆ ನಮಗೂ ಅನ್ವಯವಾಗುವ ಕೆಲಸವಾಗಬೇಕು ಎಂದು ಮನವಿ ಮಾಡಿದ್ದಾರೆ.
2013ರಲ್ಲಿ ಕರ್ತವ್ಯದ ಅವಧಿಯಲ್ಲಿ 4 ಸಾವಿರ ಪೊಲೀಸ್ ಸಿಬ್ಬಂದಿ ಮೃತಪಟ್ಟರೆ, 3,500 ಮಂದಿ ಗಾಯಗೊಂಡಿದ್ದಾರೆ. 2014ರಲ್ಲಿ 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಸಾವಿಗೀಡಾಗಿದ್ದಾರೆ. ನಮಗೆ ಕೆಲಸದ ಒತ್ತಡವೂ ಹೆಚ್ಚಿದೆ. 2013ರಲ್ಲಿ ಪೊಲೀಸರು 66,40,378 ಹೊಸ ಪ್ರಕರಣಗಳನ್ನು ದಾಖಲಿಸಿದ್ದು, 74,20,000 ಮಂದಿಯನ್ನು ಬಂಧಿಸಿದ್ದಾರೆ. ಹಾಗೆ ನೋಡಿದರೆ, 2012ರಿಂದ 2015ರ ಅವಧಿಯಲ್ಲಿ 201 ಯೋಧರಷ್ಟೇ ಮೃತಪಟ್ಟಿದ್ದಾರೆ. ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯೂ ದಿನಕ್ಕೆ 12-13 ಗಂಟೆ ಕೆಲಸ ಮಾಡುತ್ತಾನೆ.
ನಮಗೆ ವಾರದ ಅಥವಾ ತಿಂಗಳ ರಜೆಯೂ ಸಿಗುವುದಿಲ್ಲ ಎಂದು ಪೊಲೀಸರ ಸಂಘವು ಆರೋಪಿಸಿದೆ. ರಾತ್ರಿ 8ರಿಂದ ಬೆಳಗ್ಗೆ 6ರವರೆಗೆ ಕೆಲಸ ಮಾಡುವ ಸಿಬ್ಬಂದಿಗೆ ಗಂಟೆಗೆ ಶೇ.100ರಷ್ಟು ವೇತನ ನೀಡಬೇಕು, ಅಂತೆಯೇ ಅಧಿಕಾರಿಗಳಿಗೆ ಶೇ.10ರಷ್ಟು ವೇತನ ನೀಡಬೇಕು ಎಂದೂ ವೇತನ ಆಯೋಗವನ್ನು ಪೊಲೀಸರು ಒತ್ತಾಯಿಸಿದ್ದಾರೆ.