ನವದೆಹಲಿ: ರಾಜ್ಯಗಳ ಅಭಿವೃದ್ಧಿ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮಾಡಬಾರದು, ಮಹದಾಯಿ ನದಿ ವಿವಾದದ ಸಮಸ್ಯೆ ಬಗೆಹರಿಸಲು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕು ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತೆ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವ-ಪಕ್ಷಗಳ ತೆರಳಿ ಮನವಿ ಸಲ್ಲಿಸಿದ್ದೇವೆ. ಸಮಸ್ಯೆಯನ್ನು ವಿವರಿಸಿದ್ದೇವೆ, ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಮುಂದಾಗ ಬೇಕು, ಈ ವಿಷಯದಲ್ಲಿ ರಾಜಕೀಯ ಮಾಡುವುದು ಉಚಿತವಲ್ಲ ಎಂದರು. ಕಾಂಗ್ರೆಸ್ ಪಕ್ಷ 400 ಸಂಸದರಿಂದ 40ಕ್ಕೆ ಇಳಿದಿದೆ. ಆದರೂ, ಈ 40 ಮಂದಿ ಸದಸ್ಯರು ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಮೋದಿ ಜನರನ್ನು ಹಾದಿ ತಪ್ಪಿಸುವಂತಹ ಟೀಕೆ ಮಾಡುತ್ತಿದ್ದಾರೆ.
ಅಭಿವೃದ್ಧಿ ನಿಲ್ಲಲು ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರೇ ಕಾರಣ. ಸಂಸತ್ತಿನಲ್ಲಿ ನಾವು ಎತ್ತಿದ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರ ನೀಡಿಲ್ಲ. ಅವರು ಸಂಸತ್ತಿಗೆ ಬಾರದೇ ತಮ್ಮ ಕಚೇರಿಯಲ್ಲಿ ಕುಳಿತು ಟೀವಿಯಲ್ಲಿ ಸಂಸತ್ ಕಲಾಪ ವೀಕ್ಷಿಸುತ್ತಾರೆ. ಸಂಸತ್ತಿಗೆ ಅವರು ಗೌರವ ಕೊಡುತ್ತಿಲ್ಲ. ಸಂಸತ್ತಿನಿಂದ ಪಲಾಯನ ಮಾಡಿ ಹೊರಗೆ ಮಾತನಾಡುತ್ತಾರೆ. ವಿದೇಶಕ್ಕೆ ಹೋಗಿ ಹಿಂದಿನ ಸರ್ಕಾರಗಳನ್ನು ಟೀಕಿಸುತ್ತಾರೆ. ಮಾತನಾಡುವುದೇ ಅವರ ಕಾರ್ಯಕ್ರಮವಾಗಿದೆ ಎಂದು ಖರ್ಗೆ ಲೇವಡಿ ಮಾಡಿದರು. ಜಿಎಸ್‍ಟಿ ರೂಪಿಸಿದ್ದು ನಾವು. ಭೂಸ್ವಾಧೀನ ತಿದ್ದುಪಡಿ ಮಸೂದೆಯನ್ನು ತಮಗೆ ಬೇಕಾದಂತೆ ಮಾರ್ಪಡಿಸಿ ಮುಖಭಂಗ ಅನುಭವಿಸಿದರು ಎಂದರು.