ಲಂಡನ್: ಪಾಕಿಸ್ತಾನವು ಪ್ರತೀಬಾರಿ ಅಣ್ವಸ್ತ್ರ ಯುದ್ಧದ ಬೆದರಿಕೆ ಹಾಕುವುದರಿಂದ ಕಾಶ್ಮೀರ ಸಮಸ್ಯೆಯ ಬಗೆಹರಿಯುವುದಿಲ್ಲ ಎಂದು ಮಾಜಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಫರೂಖ್ ಅಬ್ದುಲ್ಲಾ ಶನಿವಾರ ಹೇಳಿದ್ದಾರೆ.
ಕಾನ್ವರ್ಸೇಶನ್ ಆನ್ ಜಮ್ಮು ಅಂಡ್ ಕಾಶ್ಮೀರ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು, ಕಾಶ್ಮೀರ ಎಂದಿಗೂ ಪಾಕಿಸ್ತಾನದ ಭಾಗವಾಗಲು ಸಾಧ್ಯವಿಲ್ಲ. ಕಾಶ್ಮೀರ ಬಿಕ್ಕಟ್ಟು ಬಗೆಹರಿಯಲು ಎರಡು ದೇಶಗಳ ಮಾತುಕತೆ ಅಗತ್ಯವಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಪದೇ ಪದೇ ಯುದ್ಧಕ್ಕೆ ಬರುವುದಾಗಿ, ಅಣ್ವಸ್ತ್ರ ಯುದ್ಧ, ಅಣುಬಾಂಬ್ ಹಾಕುವ ಬೆದರಿಕೆಯೊಡ್ಡುವುದರಿಂದ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ. ಪಾಕಿಸ್ತಾನ ಯುದ್ಧಕ್ಕೆ ಬಂದರೂ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ. ಅವರು ಬಾಂಬ್ ಹಾಕುತ್ತಾರೆ. ನಾವು ಬಾಂಬ್ ಹಾಕುತ್ತೇವೆಂದು ಯುದ್ಧವನ್ನು ಸಾರುತ್ತಾ ಹೋದರೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಆದ್ದರಿಂದ ಈ ಬಗ್ಗೆ ಎರಡು ದೇಶಗಳು ಉತ್ತಮ ಮಾರ್ಗಗನ್ನು ಕಂಡುಕೊಳ್ಳಬೇಕಾಗಿದೆ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.