ನವದೆಹಲಿ: ಕೌಟುಂಬಿಕ ದೌರ್ಜನ್ಯ ಪ್ರಕರಣ ಸಂಬಂಧ ದೆಹಲಿ ಹೈ ಕೋರ್ಟ್ ಸೋಮನಾಥ ಭಾರ್ತಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಗೊಳಿಸಿರುವುದರ ಹಿನ್ನೆಲೆಯಲ್ಲಿ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಪೊಲೀಸರಿಗೆ ಶರಣಾಗಬೇಕು ಎಂದು ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ತಮ್ಮ ಟ್ವಿಟರ್ ನಲ್ಲಿ ಈ ಸಂಬಂಧ ಪ್ರತಿಕ್ರಿಯಿಸಿರುವ ಕೇಜ್ರಿವಾಲ್ ಸೋಮನಾಥ್ ಭಾರ್ತಿ ಪ್ರಕರಣದಿಂದಾಗಿ ಆಮ್ ಆದ್ಮಿ ಪಕ್ಷಕ್ಕೆ ಕಿರಿಕಿರಿ ಉಂಟಾಗುತ್ತಿದೆ ಎಂದು ಕೇಜ್ರಿವಾಲ್ ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ಸೋಮನಾಥ ಭಾರ್ತಿ ಪತ್ನಿ ಲಿಪಿಕಾ ಮಿತ್ರಾ ದಾಖಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಭಾರ್ತಿ ಅವರನ್ನು ಬಂಧಿಸಲು ಶೋಧ ನಡೆಸಿದ್ದಾರೆ. ತಮ್ಮ ಬಂಧನ ವಿರುದ್ಧ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಜೊತೆಗೆ ಸೋಮನಾಥ್ ಭಾರ್ತಿ ಮನೆಯೊಳಗೆ ಮಾತ್ರವಲ್ಲದೆ ಸಾರ್ವಜನಿಕ ಪ್ರದೇಶಗಳಲ್ಲಿ ಲಿಪಿಕಾ ಮಿತ್ರಾ ಅವರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.
ಜಾಮೀನು ಅರ್ಜಿ ವಜಾಗೊಳಿಸಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸೋಮನಾಥ್ ಭಾರ್ತಿ ಅವರನ್ನು ಬಂಧಿಸಲು ಅವರ ಮನೆಯನ್ನು ಶೋಧ ನಡೆಸಿದ್ದಾರೆ. ಆದರೆ ಸೋಮನಾಥ್ ಭಾರ್ತಿ ನಾಪತ್ತೆಯಾಗಿದ್ದಾರೆ.