ಪಾಟ್ನಾ: ಬಿಹಾರದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡಿರುವ ಬಿಜೆಪಿ ಪಕ್ಷದ ಆಕಾಂಕ್ಷಿ ಕಚೇರಿಗೆ ಕತ್ತೆಗಳೊಂದಿಗೆ ಮೆರವಣಿಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ.
ಟಿಕೆಟ್ ಹಂಚಿಕೆ ವಿಷಯದ ಪಕ್ಷದ ನಾಯಕರು ಕತ್ತೆಗಳಂತೆ ವರ್ತಿಸುತ್ತಿದ್ದಾರೆ ಎಂದು ಸಾಂಕೇತಿಕವಾಗಿ ಹೇಳುವುದಕ್ಕೆ ಕತ್ತೆಗಳೊಂದಿಗೆ ಮೆರವಣಿಗೆ ತೆರಳಿ ಪ್ರತಿಭಟಿಸಿದ್ದಾರೆ. ಬಿಜೆಪಿಯ ವಿಜಯನಾಥ್ ತಿವಾರಿ ಬಿಹಾರದ ಚನ್ಪಾಟಿಯಾ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈತಪ್ಪಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಟಿಕೆಟ್ ಸಿಗದೇ ಇರುವುದು ಆಘಾತ ಉಂಟುಮಾಡಿದೆ ಎಂದು ಹೇಳಿದ್ದಾರೆ.
ಟಿಕೆಟ್ ನಿಡುವ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುತ್ತಿರುವ ನಾಯಕರು ಕತ್ತೆಗಳಂತೆ ವರ್ತಿಸುತ್ತಿದ್ದಾರೆ ಆದ್ದರಿಂದ ಕತ್ತೆಗಳನ್ನು ಕರೆತಂದು ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ವಿಜಯನಾಥ್ ತಿವಾರಿ ಹೇಳಿದ್ದಾರೆ. ಬಿಹಾರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಉತ್ಸುಕರಾಗಿದ್ದ ಅನೇಕ ಆಕಾಂಕ್ಷಿಗಳಿಗೆ ಟಿಕೆಟ್ ಸಿಗದೇ, ಬಿಜೆಪಿ ನಾಯಕರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.