ನವದೆಹಲಿ: ಸಂಸತ್ ಕಲಾಪ ಸುಗಮವಾಗಿ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಕೆಲ ಮಾರ್ಗಸೂಚಿಗಳನ್ನು ನೀಡಬೇಕು ಎಂಬ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ನಾವು ಯಾವುದೇ ಕಾರಣಕ್ಕೆ ಸಂಸತ್ ವ್ಯವಹಾರಗಳಲ್ಲಿ ಮೂಗು ತೂರಿಸುವುದಿಲ್ಲ. ಇದೇನಿದ್ದರೂ ಸ್ಪೀಕರ್ ಅವರಿಗಿರುವ ಪರಮಾಧಿಕಾರ. ನಾವು ಒಂದು ವೇಳೆ ಮಾರ್ಗದರ್ಶಿ ಸೂತ್ರಗಳನ್ನು ಮಾಡಿದರೆ ಲಕ್ಷ್ಮಣ ರೇಖೆ ದಾಟಿದಂತೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದಷ್ಟೇ ಅಲ್ಲ, ಈ ಸಂಬಂಧದ ಅರ್ಜಿಗಳನ್ನು ವಿಚಾರಣೆಗೆ ಒಪ್ಪಿಕೊಳ್ಳುವುದೇ ತರವಲ್ಲ ಎಂದು ಹೇಳಿದ ಕೋರ್ಟ್, ಈ ಸಂಬಂಧ ವಾದಿಸಲು ಮುಂದಾದ ವಕೀಲರಿಗೆ ಮೊದಲು ನಿಮ್ಮ ಮನೆ(ಕೋರ್ಟ್)ಯನ್ನು ಶುಚಿಯಾಗಿಟ್ಟುಕೊಳ್ಳಿರಿ ಎಂದು ಹೇಳಿತು.
'ನಿಮ್ಮ ಮನೆ ಶುಚಿಯಾಗಿಲ್ಲ ಎಂಬ ವಿಚಾರ ನಿಮಗೆ ಗೊತ್ತಿಲ್ಲ, ಆದರೆ ಮುಖ್ಯ ನ್ಯಾಯಮೂರ್ತಿಯಾದ ನನಗೆ ಗೊತ್ತು ಕೇಳಿ, ನೀವು(ವಕೀಲರು) ಅದೆಷ್ಟು ಬಾರಿ ಮದ್ರಾಸ್ ಹೈಕೋರ್ಟ್‍ನಲ್ಲಿ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಘೋಷಣೆ ಕೂಗಿದ್ದೀರಾ? ಈ ಮೂಲಕ ಕೋರ್ಟ್ ಕಲಾಪಕ್ಕೆ ಅಡ್ಡಿ ಮಾಡಿಲ್ಲವೇ'' ಎಂದು ನ್ಯಾ. ಎಚ್.ಎಲ್. ದತ್ತು ಪ್ರಶ್ನಿಸಿದರು. ಈ ಸಂದರ್ಭದಲ್ಲೇ ಮಧ್ಯ ಪ್ರವೇಶಿಸಿದ ಮತ್ತೊಮ್ಮ ನ್ಯಾಯಮೂರ್ತಿ ಅಮಿತಾವ್ ರಾಯ್, ಸಂಸತ್‍ನ ಕಾರ್ಯಕಲಾಪಗಳಲ್ಲಿ ನ್ಯಾಯಾಂಗ ತಲೆಹಾಕಬಾರದು. ಇದು ನಮ್ಮ ಕೆಲವೂ ಅಲ್ಲ ಎಂದರು.