ನವದೆಹಲಿ: ``ಮಾಲಿನ್ಯಮುಕ್ತ ವಾತಾವರಣದಲ್ಲಿ ಬೆಳೆಯುವುದು ನಮ್ಮ ಮೂಲಭೂತ ಹಕ್ಕು. ದಯವಿಟ್ಟು, ದಸರಾ ಮತ್ತು ದೀಪಾವಳಿ ಸಂದರ್ಭ ದಲ್ಲಿ ಅಬ್ಬರಿಸುವ ಪಟಾಕಿ ಸುಡುವುದಕ್ಕೆ ನಿಷೇಧ ಹೇರಿ''. ಇಂತಹುದೊಂದು ಕೋರಿಕೆಯಿರುವ ಅರ್ಜಿ ಸುಪ್ರೀಂ ಕೋರ್ಟ್‍ನ ಬಾಗಿಲು ತಟ್ಟಿದೆ.
ಈ ಅರ್ಜಿ ಸಲ್ಲಿಸಿದ್ದು ಯಾರೆಂದು ಗೊತ್ತಾದರೆ ನೀವು ಬೇಸ್ತು ಬೀಳುತ್ತೀರಿ. ಯಾರು ಗೊತ್ತಾ? 6 ರಿಂದ 14 ತಿಂಗಳೊಳಗಿನ ಮೂರು ಹಸುಗೂಸುಗಳು. ತೊಟ್ಟಿಲಲ್ಲಿರಬೇಕಾದ ಕಂದಮ್ಮಗಳು ಕೋರ್ಟ್ ನಲ್ಲಿ ಏನು ಮಾಡುತ್ತಿವೆ ಎಂದು ಕೇಳಬೇಡಿ. ಹಸುಗೂಸುಗಳ ಹೆಸರಲ್ಲಿ ಅವುಗಳ ಅಪ್ಪಂದಿರಾದ ಅರ್ಜುನ್ ಗೋಯಲ್, ಆರವ್ ಭಂಡಾರಿ ಮತ್ತು ಜೋಯಾ ರಾವ್ ಭಾಸಿನ್ ಅವರು ಅರ್ಜಿ ಸಲ್ಲಿಸಿದ್ದು, ಜೋರಾಗಿ ಶಬ್ದ ಮಾಡುವ ಪಟಾಕಿಗಳಿಗೆ ನಿಷೇಧ ಹೇರುವಂತೆ ಕೋರಿಕೊಂಡಿದ್ದಾರೆ.
ದೆಹಲಿಯಲ್ಲಿ ವಾಯು, ಶಬ್ದ ಮಾಲಿನ್ಯ ತಡೆಗಟ್ಟುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ಈ ಬಗ್ಗೆ ಮಧ್ಯಪ್ರವೇಶಿಸುವಂತೆ ಯೂ ಸುಪ್ರೀಂಗೆ ಮನವಿ ಮಾಡಲಾಗಿದೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಪುಟಾಣಿಗಳ ಕೋರಿಕೆಯೇನು?: ``ಸ್ವಚ್ಛ ಗಾಳಿಯನ್ನು ಉಸಿರಾಡಿ, ಮಾಲಿನ್ಯ ಮುಕ್ತ ವಾತಾವರಣದಲ್ಲಿ ನಾವು ಬೆಳೆಯಬೇಕು. ಇದು ನಮ್ಮ ಮೂಲಭೂತ ಹಕ್ಕು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಇದರಿಂದಾಗಿ ನಮಗೆ ಅಸ್ತಮಾ, ಶ್ವಾಸಕೋಶದ ಸಮಸ್ಯೆ, ಕೆಮ್ಮು, ಗಂಟಲೂತ ಮತ್ತಿತರ ಸಮಸ್ಯೆ ಎದುರಾಗಲೂಬಹುದು. ಹೀಗಾಗಿ ನಾವು ಆತಂಕಿತರಾಗಿದ್ದೇವೆ. ದಯವಿಟ್ಟು, ನೀವು ಮಧ್ಯಪ್ರವೇಶ ಮಾಡಿ ದೀಪಾವಳಿ, ದಸರಾ ವೇಳೆ ಜೋರಾಗಿ ಶಬ್ದ ಮಾಡುವ ಪಟಾಕಿಗಳನ್ನು ಸುಡದಂತೆ ಕ್ರಮ ಕೈಗೊಳ್ಳಿ''ಎಂದು ಅರ್ಜಿಯಲ್ಲಿ ಕೋರಲಾಗಿದೆ.