ನವದೆಹಲಿ/ಢಾಕಾ: ಇಸ್ಲಾಂ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ, ಧರ್ಮದ ಮೂಲ ತತ್ವಗಳನ್ನು ದುರ್ಬಲಗೊಳಿಸುತ್ತಿರುವ ಐಎಸ್ ಐಎಸ್ ಉಗ್ರ ಸಂಘಟನೆಯ ವಿರುದ್ಧ ದೇಶದ ಮುಸ್ಲಿಮರು ಸಮರ ಸಾರಿದ್ದಾರೆ.
ಇಸ್ಲಾಂನ ಇತಿಹಾಸವನ್ನು ತಿರುಚಿ ಹಿಂಸೆಯನ್ನು ಸಮರ್ಥಿಸಿಕೊ ಳ್ಳುತ್ತಿರುವ ಐಎಸ್ ವಿರುದ್ಧ ಹಲವು ಮುಸ್ಲಿಂ ಸಂಘಟನೆಗಳು ಅಭಿಯಾನ ಆರಂಭಿಸಿವೆ. ದೆಹಲಿ, ಜೋಧ್‍ಪುರ, ಕಲ್ಲಿಕೋಟೆ, ಲಖನೌನಲ್ಲಿ ಸಭೆ ನಡೆಸಿರುವ ಸಂಘಟನೆಗಳು, ಐಎಸ್‍ನತ್ತ ಯುವಕರು ಆಕರ್ಷಿತರಾಗದಂತೆ ತಡೆವ ನಿಟ್ಟಿನಲ್ಲಿ ಚರ್ಚೆ ನಡೆಸಿವೆ.
ಅಸ್ಸಾಂನಲ್ಲಿ ಆಸಕ್ತಿ: ಇದೇ ವೇಳೆ, ಅಸ್ಸಾಂನಲ್ಲಿ ಐಎಸ್ ಬಗ್ಗೆ ಕೆಲವರು ಆಕರ್ಷಿತರಾಗಿದ್ದು, ಈ ಬಗ್ಗೆ ನಿಗಾ ಇಡಲಾಗಿದೆ ಎಂದು ರಾಜ್ಯ ಡಿಜಿಪಿ ತಿಳಿಸಿದ್ದಾರೆ. ಏತನ್ಮಧ್ಯೆ, ಐಎಸ್ ಬಾಂಗ್ಲಾದಲ್ಲಿ ತನ್ನ ಅಸ್ತಿತ್ವವನ್ನು ಘೋಷಿಸಿದೆ. ಢಾಕಾದ ಹೈಸೆಕ್ಯೂರಿಟಿ ರಾಜತಾಂತ್ರಿಕ ಪ್ರದೇಶದಲ್ಲೇ ಇಟಲಿ ಯ ರಕ್ಷಣಾ ಕಾರ್ಯಕರ್ತ ಸೆಸೇರ್ ಟಾವೆಲ್ಲಾರನ್ನು ಐಎಸ್ ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಐಎಸ್ ಇದರ ಹೊಣೆ ಹೊತ್ತುಕೊಂಡಿದೆ.