ಅಹಮದಾಬಾದ್: ಈ ವರೆಗೆ ದೇಶಭಕ್ತಿಯನ್ನು ನಿರ್ಧರಿಸುವ ವಿಷಯಕ್ಕೆ ಮಾತ್ರ ಸೀಮಿತವಾಗಿದ್ದ ಭಾರತ್ ಮಾತಾ ಕಿ ಜೈ ಘೋಷಣೆ ಈಗ ಗುಜರಾತ್ ನ ಶಾಲೆಯೊಂದರಲ್ಲಿ ಪ್ರವೇಶ ಪ್ರಕ್ರಿಯೆ ಹಂತದ ವರೆಗೆ ತಲುಪಿದೆ.
ಗುಜರಾತ್ ನ ಬಿಜೆಪಿ ನಾಯಕ ದಿಲೀಪ್ ಸಂಘಾನಿ ನೇತೃತ್ವದ ಶ್ರೀ ಪಟೇಲ್ ವಿದ್ಯಾರ್ಥಿ ಆಶ್ರಮ್ ಟ್ರಸ್ಟ್ ನಿರ್ವಹಿಸುತ್ತಿರುವ ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕೆಂದರೆ ಕಡ್ಡಾಯವಾಗಿ ಭಾರತ್ ಮಾತಾ ಕಿ ಜೈ ಘೋಷಣೆ ಬರೆಯಬೇಕಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಭಾರತ್ ಮಾತಾ ಕಿ ಜೈ ಘೋಷಣೆಯನ್ನು ಪ್ರವೇಶ ಪಡೆಯಲು ಕೋರಿ ಸಲ್ಲಿಸುವ ಅರ್ಜಿಯಲ್ಲಿ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಬರೆಯುವುದನ್ನು ಕಡ್ಡಾಯ ಮಾಡಲು ಏ.3 ರಂದು ಶಾಲೆಯ ಆಡಳಿತ ಮಂಡಳಿ ನಿರ್ಧರಿಸಿದೆ.
ಗುಜರಾತ್ ನ ಅಮ್ರೇಲಿಯಲ್ಲಿ ಪಟೇಲ್ ವಿದ್ಯಾರ್ಥಿ ಆಶ್ರಮ್ ಟ್ರಸ್ಟ್ ಒಂದು ಪ್ರಾಥಮಿಕ ಶಾಲೆ, ಎರಡು ಪ್ರೌಢಶಾಲೆ ಹಾಗೂ ಒಂದು ಕಾಲೇಜ್ ನ್ನು ನಡೆಸುತ್ತಿದ್ದು ಸುಮಾರು 4 ,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಪ್ರವೇಶ ಪಡೆಯುವುದಕ್ಕೆ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಬರೆಯುವುದನ್ನು ಕಡ್ಡಾಯಗೊಳಿಸಿರುವುದಕ್ಕೆ ರಾಜಕೀಯ ವಿಶ್ಲೇಷಕರಿಂದ ಮತ್ತೊಂದು ರೀತಿಯ ವಿಶ್ಲೇಷಣೆ ಕೇಳಿಬಂದಿದ್ದು, ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯ್ ರುಪಾನಿ ಅವರು ಅಮ್ರೇಲಿಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹಿರೇನ್ ಹಿರ್ಪರ ಅವರನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ ವರ್ಚಸ್ಸು ಕಳೆದುಕೊಳ್ಳುವ ಭಯದಲ್ಲಿರುವ ದಿಲೀಪ್ ಸಂಘಾನಿ, ಸುದ್ದಿಯಲ್ಲಿರಲು ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.