ಮುಂಬೈ: ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಮಹಿಳೆಯರಿಗೂ ಸಮಾನ ಹಕ್ಕಿದೆ ಎಂಬ ಬಾಂಬೆ ಹೈಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ನ್ಯಾಯಾಲಯಗಳು ಧಾರ್ಮಿಕ ವಿಷಯಗಳಿಂದ ದೂರವಿರಬೇಕು ಎಂದು ಅಭಿಪ್ರಾಯಪಟ್ಟಿದೆ.
ಧಾರ್ಮಿಕ ವಿಷಯಗಳನ್ನು ನ್ಯಾಯಾಲಯಗಳಿಗೆ ಕೊಂಡೊಯ್ಯಬಾರದು ಇಂತಹ ವಿಷಯಗಳನ್ನು ಧಾರ್ಮಿಕ ಸಂತರೊಂದಿಗೆ ಚರ್ಚೆ ಮಾಡುವ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಶಿವಸೇನೆ ಸಾಮ್ನಾದ ಸಂಪಾದಕೀಯದಲ್ಲಿ ಅಭಿಪ್ರಾಯಪಟ್ಟಿದೆ. ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿಬಾಬಾ ಅವರ ಧರ್ಮದ ಬಗ್ಗೆ ಇಂದಿಗೂ ಗೊಂದಲಗಳಿವೆ, ಅಂತಹ ಗೊಂದಲಗಳನ್ನು ನ್ಯಾಯಾಲಯಗಳು ತೀರ್ಮಾನಿಸಲು ಸಾಧ್ಯವಿಲ್ಲ, ಹಾಗೆಯೇ ರಾಮ ನಿಜಕ್ಕೂ ಅಯೋಧ್ಯೆಯಲ್ಲಿಯೇ ಹುಟ್ಟಿದ್ದಾ ಎಂಬ ವಿಷಯದ ಬಗ್ಗೆ ನ್ಯಾಯಾಲಯಗಳು ತೀರ್ಪು ನೀಡಲು ಸಾಧ್ಯವಿಲ್ಲ ಅವೆಲ್ಲವೂ ಧಾರ್ಮಿಕ ನಂಬಿಕೆಗಳ ವಿಷಯವಾಗಿರಲಿದೆ ಎಂದು ಶಿವಸೇನೆ ಹೇಳಿದೆ.
ಶನಿ ಶಿಂಗ್ಣಾಪುರ ದೇವಾಲಯದಲ್ಲಿ ಯಾರಿಗೆ ಪ್ರವೇಶ ನೀಡಬೇಕು ಯಾರಿಗೆ ನೀಡಬಾರದು ಎಂಬ ಬಗ್ಗೆ ದೇವಾಲಯದ ಟ್ರಸ್ಟಿಗಳು, ಗ್ರಾಮಸ್ಥರು, ಭಕ್ತರೇ ನಿರ್ಧರಿಸಬೇಕು ಎಂದು ಶಿವಸೇನೆ ಹೇಳಿದೆ.