ಮಾಸ್ಕೋ:ಮಾಸ್ಕೋದಲ್ಲಿ ನಡೆಯಲಿರುವ ಭಾರತ, ಚೀನಾ, ರಷ್ಯಾ ದೇಶಗಳನ್ನೊಳಗೊಂಡ ತ್ರಿಪಕ್ಷೀಯ ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾಗವಹಿಸಲಿದ್ದು ಚೀನಾದೊಂದಿಗೆ ಉಗ್ರ ಮಸೂದ್ ಅಜರ್ ನ ವಿಷಯ ಪ್ರಸ್ತಾಪ ಮಾಡಲಿದ್ದಾರೆ ಎಂಬ ನಿರೀಕ್ಷೆ ಇದೆ.
ಜೈಷ್ ಎ ಮಹಮ್ಮದ್ ಉಗ್ರ ಮಸೂದ್ ಅಜರ್‌ನನ್ನು ಘೋಷಿತ ಉಗ್ರನಿಗೆ ವಿಶ್ವ ಸಂಸ್ಥೆ ಮೂಲಕ ನಿಷೇಧ ವಿಧಿಸುವ ಭಾರತದ ಯತ್ನಕ್ಕೆ ಅಡ್ಡಿ ಮಾಡಿದ ಚೀನಾದ ಕ್ರಮವನ್ನು ಭಾರತ ಸರ್ಕಾರ ವಿರೋಧಿಸಿದ್ದು, ತ್ರಿಪಕ್ಷೀಯ ಸಭೆಯಲ್ಲಿ ಭಾಗವಹಿಸಲಿರುವ ಚೀನಾದ ವಿದೇಶಾಂಗ ಸಚಿವರಾದ ವಾಂಗ್ ಯೀಯೊಂದಿಗೆ ಚೀನಾ ಕ್ರಮವನ್ನು ಪ್ರಶ್ನಿಸಲಿದ್ದಾರೆ ಎಂದು ಹೇಳಲಾಗಿದೆ. ಚೀನಾದೊಂದಿಗೆ ಭಾರತ ಸರ್ಕಾರ ಈಗಾಗಲೇ ಅಜರ್ ನ ವಿಷಯದ ಬಗ್ಗೆ ಮಾತನಾಡಿದ್ದು ನೀವು ಭಯೋತ್ಪಾದಕರನ್ನು ಕಾಪಾಡುವ ಪ್ರಯತ್ನ ಮಾಡುತ್ತಿದ್ದೀರಿ ಎಂಬ ಸಂದೇಶ ರವಾನೆ ಮಾಡಿದೆ.
ತ್ರಿಪಕ್ಷೀಯ ಸಭೆಯಲ್ಲಿ ವಿದೇಶಾಂಗ ಸಚಿವರು ಪ್ರಸ್ತಾಪಿಸಲಿರುವ ಅಂಶಗಳ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ರಷ್ಯಾ, ಚೀನಾದೊಂದಿಗೆ ಪರಸ್ಪರ ಕಾಳಜಿ, ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ವೇಳೆ ಮಸೂದ್ ಅಜರ್ ವಿಷಯ ಪ್ರಸ್ತಾಪ ಹಾಗೂ ಅದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಮುಂದಿನ ಕ್ರಮದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ವಿಕಾಸ್ ಸ್ವರೂಪ್, ಚೀನಾದೊಂದಿಗಿನ ಮಾತುಕತೆಯ ನಂತರ ಭಾರತ ಸರ್ಕಾರ ತನ್ನ ಮುಂದಿನ ನಡೆಯನ್ನು ತೀರ್ಮಾನಿಸಲಿದೆ ಎಂದು ಹೇಳಿದ್ದಾರೆ.