ಬೆಂಗಳೂರು: ರೈಲ್ವೆ ಇಲಾಖೆಯ ಎಲ್ಲಾ ಶ್ರೇಣಿಗಳಲ್ಲಿಯೂ ಸಿಬ್ಬಂದಿ ಕೊರತೆಯನ್ನು ನಿವಾರಿಸಲು ತಾಂತ್ರಿಕೇತರ ಸಿಬ್ಬಂದಿ ವರ್ಗಕ್ಕೆ ಸಾಮೂಹಿಕ ಆನ್ ಲೈನ್ ನೇಮಕಾತಿ ಪರೀಕ್ಷೆ ನಡೆಯುತ್ತಿದೆ ಎಂದು ರೈಲ್ವೆ ಮಂಡಳಿಯ ಸಿಬ್ಬಂದಿ ವಿಭಾಗದ ಅಧಿಕಾರಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಅವರು ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರ್ತಿಯೊಂದಿಗೆ ಮಾತನಾಡಿದರು. ಭಾರತದಲ್ಲಿಯೇ ಇದು ಅತಿ ದೊಡ್ಡ ಪರೀಕ್ಷೆಯಾಗಿದ್ದು, 18 ಸಾವಿರದ 252 ಹುದ್ದೆಗಳಿಗೆ 92 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಮಾರ್ಚ್ 28ರಂದು ದೇಶದ 300 ನಗರಗಳಲ್ಲಿ ಆರಂಭಗೊಂಡಿರುವ ಪರೀಕ್ಷೆ ಮೇ 3ರವರೆಗೆ ನಡೆಯಲಿದೆ ಎಂದು ಹೇಳಿದರು.
ಪ್ರತಿದಿನ ಮೂರು ಶಿಫ್ಟ್ ಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ದೇಶಾದ್ಯಂತ ದಿನದಲ್ಲಿ ಸರಾಸರಿ ಸಾವಿರ ಶಿಫ್ಟ್ ಗಳಲ್ಲಿ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಪಾಡಲು ಆನ್ ಲೈನ್ ಮೂಲಕ ನಡೆಸಲಾಗುತ್ತಿದ್ದು, ನಮ್ಮ ದೇಶದಲ್ಲಿ ಇಂತಹ ಪರೀಕ್ಷೆ ನಡೆಯುತ್ತಿರುವುದು ಇದು ಮೂರನೇ ಸಲ.
ಸಹಾಯಕ ಸ್ಟೇಷನ್ ಮಾಸ್ಟರ್ ಮತ್ತು ಗೂಡ್ಸ್ ರೈಲ್ವೆ ಗಾರ್ಡ್ ಗಳನ್ನು ಈ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಕುಮಾರ್ ತಿಳಿಸಿದರು. ಹುಬ್ಬಳ್ಳಿಯ ರೈಲ್ವೆ ವಿಭಾಗದ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, ದಕ್ಷಿಣ ಪಶ್ಚಿಮ ರೈಲ್ವೆಗೆ ಮುಂದಿನ ಒಂದೂವರೆ ವರ್ಷಗಳಲ್ಲಿ 305 ಸಹಾಯಕ ಸ್ಟೇಷನ್ ಮಾಸ್ಟರ್ ಮತ್ತು 180 ಗಾರ್ಡ್ ಗಳು ಬೇಕಾಗಿದ್ದಾರೆ. ಇದಕ್ಕಾಗಿ ನಾವು ರೈಲ್ವೆ ಮಂಡಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ರೈಲ್ವೆ ಇಲಾಖೆಯಲ್ಲಿ ಗ್ಯಾಂಗ್ ವುಮೆನ್ ಹುದ್ದೆಗಳಿಗೆ ಬರುವ ಯುವತಿಯರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿದೆ. ಗ್ಯಾಂಗ್ ವುಮೆನ್ ಗಳ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಇಲಾಖೆ ಪ್ರಯತ್ನಿಸುತ್ತಿದೆ. ಆದರೆ ಅದು ತಕ್ಷಣಕ್ಕೆ ಆಗುವುದಿಲ್ಲ. ಅದೇ ರೀತಿ ಅವರ ಯೂನಿಫಾರ್ಮ್ ಸೀರೆಯ ಬಣ್ಣವನ್ನು ಬದಲಾಯಿಸುವ ಸಾಧ್ಯತೆಯಿಲ್ಲ ಎಂದು ತಿಳಿಸಿದ್ದಾರೆ. ಆಕಾಶ ನೀಲಿ ಬಣ್ಣದ ಸೀರೆಯನ್ನು ಬದಲಾಯಿಸಿ ಬೇರೆ ಬಣ್ಣದ ಸೀರೆಯನ್ನು ಯೂನಿಫಾರ್ಮ್ ಮಾಡಬೇಕೆಂದು ಗ್ಯಾಂಗ್ ವುಮೆನ್ ಒತ್ತಾಯಿಸುತ್ತಿದ್ದಾರೆ.
ಅಧಿಕ ವೆಚ್ಚ: 7ನೇ ವೇತನ ಆಯೋಗದ ಜಾರಿಯಿಂದ ಭಾರತೀಯ ರೈಲ್ವೆ ಇಲಾಖೆ ವರ್ಷಕ್ಕೆ 30 ಸಾವಿರ ಕೋಟಿ ರೂಪಾಯಿಯಷ್ಟು ಭಾರೀ ವೆಚ್ಚವನ್ನು ಭರಿಸಬೇಕಾಗಿದೆ. ಜಾಹೀರಾತು ಮತ್ತು ಭೂಮಿಯನ್ನು ಬಳಸಿಕೊಳ್ಳುವ ಮೂಲಕ ಹೆಚ್ಚಿನ ಹಣ ಸಂಗ್ರಹಿಸಲು ಇಲಾಖೆ ಮುಂದಾಗಿದೆ ಎಂದು ಪ್ರದೀಪ್ ಕುಮಾರ್ ತಿಳಿಸಿದ್ದಾರೆ.