ನವದೆಹಲಿ: ಝೆಲಿಯಾನ್ಗಂಗ್ ಯುನೈಟೆಡ್ ಫ್ರಂಟ್(ಝುಡ್ಯುುಎಫ್) ಹಾಗೂ ಭಾರತೀಯ ಸೇನೆಯ ಪ್ಯಾರಾ ವಿಶೇಷ ಭದ್ರತಾ ಪಡೆ ನಡುವೆ ನಡೆದ ಎನ್ಕೌಂಟರ್ ನಲ್ಲಿ ಮೇಜರ್ ಅಮಿತ್ ದೆಸ್ವಾಲ್ ಹುತಾತ್ಮರಾಗಿದ್ದಾರೆ.
ಕಳೆದ ರಾತ್ರಿ ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯಲ್ಲಿ ಭದ್ರತಾ ಪಡೆ ಯೋಧರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಅಮಿತ್ ದೆಸ್ವಾಲ್ ಅವರಿಗೆ ಉಗ್ರರು ಹಾರಿಸಿದ ಗುಂಡು ತಗುಲಿ ಹುತಾತ್ಮರಾಗಿದ್ದಾರೆ. ಇನ್ನು ಕಾರ್ಯಾಚರಣೆ ವೇಳೆ ಓರ್ವ ಉಗ್ರರನನ್ನು ಯೋಧರು ಹೊಡೆದುರುಳಿಸಿದ್ದಾರೆ.
ಇನ್ನು ಹಲವು ಉಗ್ರರು ಅಡಗಿರುವ ಶಂಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ರೈಫಲ್ ಹಾಗೂ ಪ್ಯಾರಾ ವಿಶೇಷ ಭದ್ರತಾ ಪಡೆ ಜಂಟಿಯಾಗಿ ಶೋಧಕಾರ್ಯ ಮುಂದುವರಿಸಿದೆ.
ಹುತಾತ್ಮ ಅಮಿತ್ ದೆಸ್ವಾಲ್ ಅವರು ಹರ್ಯಾಣದ ಝಾಜ್ಜರ್ ಜಿಲ್ಲೆಯವರಾಗಿದ್ದು, ಅವರ ಮೃತದೇಹವನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ.