ನವದೆಹಲಿ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಚೌಕಾಶಿ ಮಾಡುವುದರಲ್ಲಿ ನಿಪುಣೆ ಎಂಬುದನ್ನು 14 ವರ್ಷಗಳ ಹಿಂದೆ ವಾಜಪೇಯಿ ಸರ್ಕಾರವಿರುವಾಗಲೇ ತೋರಿಸಿಕೊಟ್ಟಿದ್ದರು.
ದೆಹಲಿಯಲ್ಲಿ ಅವರಿಗೆ ಮಂಜೂರು ಮಾಡಲಾಗಿದ್ದ 2 ಸಾವಿರದ 765 ಚದರಡಿ ವಿಸ್ತೀರ್ಣದ ಬಾಡಿಗೆ ಮನೆಗೆ ತಿಂಗಳಿಗೆ 53 ಸಾವಿರದ 421 ರೂಪಾಯಿ ಕಟ್ಟಲು ಸಾಧ್ಯವಿಲ್ಲ. ಅದು ತಮ್ಮ ಸಾಮರ್ಥ್ಯಕ್ಕೆ ಮೀರಿದ ಮೊತ್ತವಗಿದೆ ಎಂದು ಚೌಕಾಶಿ ಮಾಡಿ 8 ಸಾವಿರದ 888 ರೂಪಾಯಿಗಳಿಗೆ ಇಳಿಸಿದ್ದರು.
ಭದ್ರತೆ ದೃಷ್ಟಿಯಿಂದ ಪ್ರಿಯಾಂಕಾ ಗಾಂಧಿಯವರಿಗೆ ದೆಹಲಿಯ ಲೋಧಿ ಎಸ್ಟೇಟ್ ನಲ್ಲಿರುವ 4ನೇ ವರ್ಗದ ಸರ್ಕಾರಿ ವಸತಿಗೃಹವನ್ನು ಮಂಜೂರು ಮಾಡಲಾಗಿತ್ತು. ಅದಕ್ಕೆ ಈಗ ಪ್ರಿಯಾಂಕಾ ತಿಂಗಳಿಗೆ 31 ಸಾವಿರದ 300 ರೂಪಾಯಿ ಬಾಡಿಗೆ ಕಟ್ಟುತ್ತಿದ್ದಾರೆ. ಪ್ರಿಯಾಂಕಾ ಮತ್ತು ಮತ್ತೆ ಮೂವರು ಖಾಸಗಿ ವ್ಯಕ್ತಿಗಳಾದ ಪಂಜಾಬ್ ಮಾಜಿ ಡಿಜಿಪಿ ಕೆಪಿಎಸ್ ಗಿಲ್, ಅಖಿಲ ಭಾರತ ಭ್ರಷ್ಟಾಚಾರ ವಿರೋಧಿ ಬಣದ ಮುಖ್ಯಸ್ಥ ಎಂ.ಎಸ್.ಬಿಟ್ಟಾ ಮತ್ತು ಪಂಜಾಬ್ ಕೇಸರಿ ಪತ್ರಿಕೆಯ ಸಂಪಾದಕ ಅಶ್ವನಿ ಕುಮಾರ್ ಅವರಿಗೆ ಸರ್ಕಾರಿ ವಸತಿಗೃಹವನ್ನು ಒದಗಿಸಲಾಗಿತ್ತು. ಗಿಲ್ ಮತ್ತು ಬಿಟ್ಟಾ ಪ್ರಿಯಾಂಕಾರವರು ನೀಡುತ್ತಿರುವಷ್ಟೇ ಬಾಡಿಗೆಯನ್ನು ಸರ್ಕಾರಕ್ಕೆ ಕಟ್ಟುತ್ತಿದ್ದಾರೆ ಎಂದು ನಂಬಲಾಗಿದೆ. ಅಶ್ವನಿ ಕುಮಾರ್ 2012ರಲ್ಲಿಯೇ ವಾಸ್ತವ್ಯವನ್ನು ಸ್ಥಳಾಂತರಿಸಿದ್ದಾರೆ.
2002, ಮೇ 7ರಂದು ಸರ್ಕಾರಕ್ಕೆ ಪತ್ರ ಬರೆದಿದ್ದ ಪ್ರಿಯಾಂಕಾ, ತಿಂಗಳಿಗೆ 53 ಸಾವಿರದ 421 ರೂಪಾಯಿ ಕಟ್ಟುವುದು ತಮ್ಮ ಸಾಮರ್ಥ್ಯಕ್ಕೆ ಮೀರಿದ್ದಾಗಿದೆ. ಬಂಗಲೆಯ ಬಹುಪಾಲನ್ನು ಎಸ್ ಪಿಜಿಯವರೇ ಹೊಂದಿದ್ದಾರೆ. ತಾವು ಮತ್ತು ತಮ್ಮ ಕುಟುಂಬ ಸಾಮಾನ್ಯ ಗುಂಪಿನ ಮನೆಯಲ್ಲಿ ಉಳಿದುಕೊಂಡಿದ್ದೇವೆ. ಅದು ಸ್ವ ಬಯಕೆಯಿಂದಲ್ಲ ಬದಲಿಗೆ ರಕ್ಷಣೆಯ ದೃಷ್ಟಿಯಿಂದ ಎಂದು ಹೇಳಿದ್ದಾರೆ. ಮೊದಲು ನೀಡುತ್ತಿದ್ದಂತೆ ತಿಂಗಳಿಗೆ 28 ಸಾವಿರದ 451 ರೂಪಾಯಿ ಬಾಡಿಗೆ ನೀಡಬಹುದೇ ಹೊರತು 53 ಸಾವಿರ ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂದು ನಗರಾಭಿವೃದ್ಧಿ ನಿರ್ದೇಶನಾಲಯ ಹೇಳಿದೆ.
ಆಗ ಸರ್ಕಾರಿ ಬಂಗಲೆಯಲ್ಲಿದ್ದ ಇತರ ನಾಲ್ವರು ಹೆಚ್ಚಿನ ಬಾಡಿಗೆಯನ್ನು ಕಟ್ಟುತ್ತಿದ್ದರು. ಆದರೆ ಪ್ರಿಯಾಂಕಾ ಗಾಂಧಿ ಮಾತ್ರ 2004 ಜನವರಿಯವರೆಗೆ 3 ಲಕ್ಷದ 76 ಸಾವಿರ ರೂಪಾಯಿ ಉಳಿಸಿಕೊಂಡಿದ್ದರು.
ನೋಯ್ಡಾ ನಿವಾಸಿ ದೇವ್ ಆಶಿಶ್ ಭಟ್ಟಾಚಾರ್ಯ ಅವರು ಆರ್ ಟಿಐಯಡಿ ಕೇಳಿದ ಪ್ರಶ್ನೆಗೆ ವಸತಿ ಕುರಿತ ಸಂಪುಟ ಸಮಿತಿ ಉತ್ತರ ನೀಡಿದೆ. ಪ್ರಿಯಾಂಕಾ ಗಾಂಧಿಗೆ 1997ರಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ಮತ್ತು ಗೃಹ ಸಚಿವಾಲಯದ ಶಿಫಾರಸ್ಸಿನಂತೆ ದೆಹಲಿ ನಗರದ ಹೃದಯಭಾಗದಲ್ಲಿ ಸರ್ಕಾರಿ ಬಂಗಲೆಯನ್ನು ಬಾಡಿಗೆಗೆ ಮಂಜೂರು ಮಾಡಲಾಗಿತ್ತು.