ನವದೆಹಲಿ: ಫ್ರಾನ್ಸ್ ನೊಂದಿಗಿನ ರಾಫೆಲ್ ಡೀಲ್ ಮಾತುಕತೆ ಪ್ರಗತಿಯಲ್ಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
ರಾಫೆಲ್ ಜೆಟ್ ಖರೀದಿ ಒಪ್ಪಂದ 8.8 ಬಿಲಿಯನ್ ಡಾಲರ್ ಗೆ ಅಂತಿಮವಾಗಿದೆ ಎಂಬ ಮಾಹಿತಿ ಫೇಸ್ ಬುಕ್ ನ ಬಿಜೆಪಿ ಪಕ್ಷದ ಪೇಜ್ ನಲ್ಲಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆ ಉತ್ತರಿಸಿರುವ ಮನೋಹರ್ ಪರಿಕ್ಕರ್, ಸದ್ಯದ ಪರಿಸ್ಥಿತಿಯಲ್ಲಿ ರಾಫೆಲ್ ಡೀಲ್ ಮಾತುಕತೆ ಪ್ರಗತಿಯಲ್ಲಿದೆ ಎಂಬುದನ್ನಷ್ಟೇ ಹೇಳಲು ಸಾಧ್ಯ ಎಂದು ತಿಳಿಸಿದ್ದಾರೆ.
ರಾಫೆಲ್ ಫೈಟರ್ ಜೆಟ್ ಗಳ ಖರೀದಿ ಒಪ್ಪಂದವನ್ನು ಶೀಘ್ರವೇ ಇತ್ಯರ್ಥಗೊಳಿಸುತ್ತೇವೆ. ಒಪ್ಪಂದಕ್ಕೆ ಸಹಿ ಹಾಕುವವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವರು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಫೆಲ್ ಜೆಟ್ ಗಳ ಖರೀದಿಯನ್ನು 80,000 ಕೋಟಿ ರೂಪಾಯಿಗಳಿಗೆ ಅಂತಿಮಗೊಳಿಸುವ ಮೂಲಕ 3 .2 ನಷ್ಟು ಹಣ( 21 ,000 ಕೋಟಿ) ಯಷ್ಟು ಹಣವನ್ನು ಉಳಿತಾಯ ಮಾಡಿದ್ದಾರೆ ಎಂದು ಫೇಸ್ ಬುಕ್ ನ ಬಿಜೆಪಿ ಪೇಜ್ ನಲ್ಲಿ ಬರೆಯಲಾಗಿತ್ತು. 2012 ರಲ್ಲಿ ಭಾರತ ಸರ್ಕಾರ 126 ರಾಫೆಲ್ ಜೆಟ್ ಗಳನ್ನು ಖರೀದಿಸಲು ನಿರ್ಧರಿಸಿತ್ತು. ಆದರೆ ಈ ವರೆಗೂ ಒಪ್ಪಂದ ಅಂತಿಮವಾಗಿಲ್ಲ. ಕಳೆದ ಏಪ್ರಿಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಗೆ ಭೇಟಿ ನೀಡಿದ್ದ ವೇಳೆ 36 ರಾಫೆಲ್ ಯುದ್ಧ ಜೆಟ್ ಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದರು.