ತಿರುಪತಿ: ನವದಂಪತಿಯೊಂದು ಸೆಲ್ಫಿ ವಿಡಿಯೋ ತೆಗೆದುಕೊಂಡು ಬಳಿಕ ನೇಣಿಗೆ ಶರಣಾಗಿರುವ ಘಟನೆಯೊಂದು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ಗೆಸ್ಟ್ ಹೌಸ್ ನಲ್ಲಿ ಮಂಗಳವಾರ ನಡೆದಿದೆ.
ಸಂಪತ್ ಕುಮಾರ್ (25), ಸತ್ಯವಾನಿ (17) ಆತ್ಮಹತ್ಯೆಗೆ ಶರಣಾದ ನವದಂಪತಿ. ಆತ್ಮಹತ್ಯೆಗೆ ಶರಣಾದವರು ತಮಿಳುನಾಡಿನ ಕೊಯಮತ್ತೂರಿನ ಮೂಲದವರಾಗಿದ್ದಾರೆಂದು ತಿಳಿದುಬಂದಿದೆ.
ಸತ್ಯವಾನಿ ಮೊದಲ ವರ್ಷದ ಪಿಯುಸಿ ಓದುತ್ತಿದ್ದು, ಈಕೆ ಕಳೆದ 1 ವರ್ಷದಿಂದಲೂ ದಿನಗೂಲಿ ಕಾರ್ಮಿಕನಾಗಿದ್ದ ಸಂಪತ್ ಕುಮಾರ್ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಇಬ್ಬರ ಪ್ರೀತಿಗೆ ಸತ್ಯವಾನಿಯವರ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಇದರಂತೆ ಇಬ್ಬರು ಮನೆಬಿಟ್ಟು ಫೆಬ್ರವರಿ ತಿಂಗಳಿನಲ್ಲಿ ದೇವಾಲಯವೊಂದರಲ್ಲಿ ವಿವಾಹವಾಗಿದ್ದರು.
ನಂತರ ಸತ್ಯವಾನಿಯವರ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ದರು. ಬಾಲಕಿಯನ್ನು ಹುಡುಕಿದ್ದ ಪೊಲೀಸರು ನಂತರ ಪೋಷಕರ ವಶಕ್ಕೆ ನೀಡಿ, ಸಂಪತ್ ಕುಮಾರ್ ವಿರುದ್ಧ ಪೊಲೀಸರು ಮಕ್ಕಳ ರಕ್ಷಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೊಳಪಡಿಸಿದ್ದರು. ಕೆಲವು ದಿನಗಳ ನಂತರ ಸಂಪತ್ ಜಾಮೀನು ಮೇಲೆ ಬಿಡುಗಡೆ ಗೊಂಡಿದ್ದ. ಇದರಂತೆ ಕಳೆದ ನಾಲ್ಕು ದಿನಗಳ ಹಿಂದೆ ಮತ್ತೆ ಬಾಲಕಿ ನಾಪತ್ತೆಯಾಗಿದ್ದಳು.
ಈ ಬಾರಿ ಪೋಷಕರು ಪೊಲೀಸರಿಗೆ ಯಾವುದೇ ದೂರನ್ನು ದಾಖಲಿಸಿರಲಿಲ್ಲ. ಆದರೆ, ಬಾಲಕಿ ಹಾಗೂ ಸಂಪತ್ ಕುಮಾರ್ ಇಬ್ಬರು ತಿರುಪತಿಗೆ ಹೋಗಿ ಪೋಷಕರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದು, ನಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಿ ಸೆಲ್ಫೀ ವಿಡಿಯೋ ತೆಗೆದುಕೊಂಡು ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.