ನವದೆಹಲಿ: ಕೋಹಿನ್ನೂರ್ ವಜ್ರವನ್ನು ವಾಪಸ್ ಭಾರತಕ್ಕೆ ವಾಪಸ್ ತರುವುದರ ಬಗ್ಗೆ ವಿವರ ಹಂಚಿಕೊಳ್ಳಲು ಭಾರತ ಸರ್ಕಾರ ನಿರಾಕರಿಸಿದೆ.
ಕೋಹಿನ್ನೂರ್ ವಜ್ರದ ವಿಷಯ ವಿಚಾರಣಾಧೀನ ವಿಷಯವಾಗಿರುವುದರಿಂದ ವಿವರ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಭಾರತ ಸರ್ಕಾರ ತಿಳಿಸಿದೆ. ಬ್ರಿಟನ್ ನಲ್ಲಿರುವ ಅಪರೂಪದ ವಜ್ರವನ್ನು ವಾಪಸ್ ತರುವುದರ ಬಗ್ಗೆ ಮಾಹಿತಿಯನ್ನು ಕೇಳಿ ಆರ್ ಟಿಐ ದಾಖಲಿಸಲಾಗಿತ್ತು. ಆರ್ ಟಿಐ ಗೆ ಉತ್ತರಿಸಿರುವ ಭಾರತೀಯ ಪುರಾತತ್ವ ಸಂಸ್ಥೆ ಈ ವಿಷಯ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ವಿವರ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಕೋಹಿನ್ನೂರ್ ವಜ್ರವನ್ನು ವಾಪಸ್ ತರಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೇಳಿ, ವಿದೇಶಾಂಗ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು ನಂತರ ಈ ಅರ್ಜಿಯನ್ನು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಲಾಗಿತ್ತು. ಕೋಹಿನ್ನೂರ್ ವಜ್ರದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು ಕಳೆದ ಕೆಲವು ದಿನಗಳಿಂದ ಕೋಹಿನ್ನೂರ್ ವಜ್ರವನ್ನು ವಾಪಸ್ ತರುವುದರ ಬಗ್ಗೆ ಚರ್ಚೆ ನಡೆಯುತ್ತಿದೆ.