ದೇಶ

"ಅತ್ಯಾಚಾರಿಗಳನ್ನು ಶೂಟ್ ಮಾಡಿ: ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಕೊಡಿ"

Shilpa D

ನವದೆಹಲಿ: ಜೀವನದಲ್ಲಿ ನನಗೆ ಒಮ್ಮೆ ಅವಕಾಶ ಸಿಕ್ಕರೆ, ಅತ್ಯಾಚಾರಿಗಳನ್ನು ನಾನೇ ಗುಂಡಿಟ್ಟು ಕೊಲ್ಲುತ್ತೇನೆ ಎಂದು ಬುಲಂದಶರ್ ನಲ್ಲಿ ತಮ್ಮ ಕಣ್ಣೆದುರೇ ಅತ್ಯಾಚಾರಕ್ಕೊಳಗಾದ ಪತ್ನಿ ಮತ್ತು ಮಗಳ ತಂದೆ ಹೇಳಿದ್ದಾರೆ.

ತನ್ನ ಕಣ್ಣ ಮುಂದೆಯ ಹೆಂಡತಿ ಮತ್ತು ಮಗಳ ಮೇಲೆ ಅತ್ಯಾಚಾರ ನಡೆದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದೆ. ನನ್ನ ಮಗಳು ಹಾಗೂ ಹೆಂಡತಿಯನ್ನು ಬಿಟ್ಟು ಬಿಡಿ, ನಮ್ಮಲ್ಲಿರುವ ಹಣ, ಒಡವೆ ಎಲ್ಲವನ್ನೂ ತೆಗೆದುಕೊಳ್ಳಿ ಎಂದು ಪರಿ ಪರಿಯಾಗಿ ಬೇಡಿದರೂ ಅವರ ಕಲ್ಲು ಹೃದಯ ಕರಗಲಿಲ್ಲ, ಹೆಂಡತಿ ಮತ್ತು ಮಗಳ ಆಕ್ರಂದನ ಕೇಳಿಸಿಕೊಳ್ಳುವುದು ಬಿಟ್ಟು ನನಗೆ ಇನ್ನೇನು ಮಾಡಲಾಗಲಿಲ್ಲ ಎಂದು ಅವರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನನ್ನ ಹೆಂಡತಿ ಹಾಗೂ ಮಗಳಿಗೆ ಮನ ಬಂದಂತೆ ಥಳಿಸಿ ಅತ್ಯಾಚಾರ ನಡೆಸಲಾಯಿತು.  ಕಬ್ಬಿಣದ ರಾಡ್ ಗಳಿಂದ ನಮ್ಮ ಮೇಲೆ ಹಲ್ಲೆ ನಡೆಸಲಾಯಿತು. ನನ್ನ ನೋವು ನಿಮಗೆ ಅರ್ಥವಾಗುವುದಿಲ್ಲ, ದಯವಿಟ್ಟು ಅಪರಾಧಿಗಳನ್ನು ಸಾರ್ವಜನಿಕವಾಗಿ ಕರೆ ತಂದು ನನ್ನ ಮಗಳು ಹಾಗೂ ಹೆಂಡತಿ ಗುಂಡಿಟ್ಟು ಕೊಲ್ಲಲು ಅವಕಾಶ ಕೊಡಿ, ಇಲ್ಲವೇ ನಮ್ಮ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ನೀಡಿ ಎಂದು ಬೇಡಿಕೊಂಡಿದ್ದಾರೆ.

ಉತ್ತರ ಪ್ರದೇಶ ಪೊಲೀಸರು ಪ್ರಕರಣ ಸಂಬಂಧ ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಆದರೆ ಪೊಲೀಸರು ಆರೋಪಿಗಳನ್ನು ತಮ್ಮ ಕಸ್ಟಡಿಗೆ ನೀಡುವಂತೆ ಕೇಳದೇ ಇರುವುದು ಆಶ್ಚರ್ಯ ಮೂಡಿಸಿದೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಡಾಕ್ಟರ್ ಆಕೆಗೆ ಅಸಹ್ಯವಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಪೊಲೀಸರು ಮಕ್ಕಳ ಮೇಲಿನ ದೌರ್ಜನ್ಯ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರ ಮಂಗಳಂ ಆರೋಪಿಸಿದ್ದಾರೆ.

SCROLL FOR NEXT