ದೇಶ

ಆನಂದಿ ಬೆನ್ ಅವರನ್ನು ಬಲಿಪಶು ಮಾಡುವುದರಿಂದ ಗುಜರಾತ್ ನಲ್ಲಿ ಬಿಜೆಪಿ ಕಾಪಾಡಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

Sumana Upadhyaya
ನವದೆಹಲಿ: ಆನಂದಿಬೆನ್ ಪಟೇಲ್ ಅವರು ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನದ ಬಳಿಕ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅವರನ್ನು ಬಲಿಪಶು ಮಾಡುವುದರಿಂದ ಬಿಜೆಪಿಯನ್ನು ರಕ್ಷಿಸಲು ಸಾಧ್ಯವಿಲ್ಲ; ಗುಜರಾತ್ ನ ಇಂದಿನ ಪರಿಸ್ಥಿತಿಗೆ ನರೇಂದ್ರ ಮೋದಿಯವರ 13 ವರ್ಷಗಳ ಆಡಳಿತವೇ ಕಾರಣ ಎಂದು ಟೀಕಿಸಿದರು.
ಇಂದು ಗುಜರಾತ್ ನಲ್ಲಿ ಪ್ರತಿಭಟನೆ, ಹಲ್ಲೆ, ದಂಗೆ, ಹೋರಾಟ ನಡೆಯುತ್ತಿದ್ದು, ಪರಿಸ್ಥಿತಿ ಕ್ಷೋಭೆಗೆ ತಿರುಗಲು ನರೇಂದ್ರ ಮೋದಿಯವರ 13 ವರ್ಷಗಳ ಆಡಳಿತ ಕಾರಣವೇ ಹೊರತು 2 ವರ್ಷಗಳ ಆನಂದಿಬೆನ್ ಅವರ ಆಡಳಿತ ಕಾರಣವಲ್ಲ. ಅವರನ್ನು ಬಲಿಪಶು ಮಾಡುವುದರಿಂದ ಬಿಜೆಪಿಯನ್ನು ಉಳಿಸಲು ಸಾಧ್ಯವಿಲ್ಲ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿದ್ದಾರೆ.
ತಾವು 75ನೇ ವರ್ಷಕ್ಕೆ ಕಾಲಿಡುತ್ತಿದ್ದು, ಹೊಸಬರಿಗೆ ಅವಕಾಶ ಮಾಡಿಕೊಡಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಆನಂದಿಬೆನ್ ಪಟೇಲ್ ಹೇಳಿದ್ದರು.
ಗುಜರಾತ್ ವಿಧಾನಸಭೆ ಚುನಾವಣೆ ಮುಂದಿನ ವರ್ಷ ಕೊನೆಯಲ್ಲಿ ನಡೆಯಲಿದ್ದು, ಅಲ್ಲಿನ ಪಶ್ಚಿಮ ಭಾಗಗಳಲ್ಲಿ ಪಂಚಾಯತ್ ಚುನಾವಣೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶ ಕಂಡಿದೆ.
2 ದಶಕಗಳಿಗೂ ಹೆಚ್ಚು ಕಾಲದಿಂದ ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರ ಹೊಂದಿಲ್ಲ. ಕಳೆದ ವರ್ಷ ಗುಜರಾತ್ ನಲ್ಲಿ, ಪಾಟೀದಾರ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು. ಇತ್ತೀಚೆಗೆ ಉನಾದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಪ್ರಕರಣ ಕೂಡ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.
SCROLL FOR NEXT