ದೇಶ

ಆನಂದಿ ಬೆನ್ ಉತ್ತರಾಧಿಕಾರಿ ಯಾರು? ನಿತೀನ್ ಪಟೇಲ್ ಅಥವಾ ಸೌರಭ್ ಪಟೇಲ್

Vishwanath S
ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರು ಮುಖ್ಯಮಂತ್ರಿ ಹುದ್ದೆಯಿಂದ ಹಿಂದೆ ಸರಿಯುತ್ತಿದ್ದು, ಆನಂದಿಬೆನ್ ನಂತರ ಗುಜರಾತ್ ನ ಮುಂದಿನ ಸಿಎಂ ಯಾರಾಗಬಹುದು ಎಂಬ ಕುತೂಹಲ ಇದೀಗ ಗರಿಗೇದರಿದೆ. 
ನವೆಂಬರ್ ತಿಂಗಳಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ತಾವು ರಾಜಿನಾಮೆ ನೀಡುತ್ತಿರುವುದಾಗಿ ಹೈ ಕಮಾಂಡ್ ಗೆ ಆನಂದಿ ಬೆನ್ ವಿನಂತಿಸಿಕೊಂಡಿದ್ದಾರೆ. ಈ ಮೂಲಕ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಉಕ್ಕಿನ ಮಹಿಳೆ ಖ್ಯಾತಿಯ ಪಟೇಲ್ ಗುಜರಾತ್ ಚುನಾವಣೆಗೆ ಇನ್ನು 17 ತಿಂಗಳು ಇರುವಂತೆ ಸ್ಥಾನ ತ್ಯಜಿಸಿದ್ದಾರೆ. 
ಇದೀಗ ಆನಂದಿ ಬೆನ್ ಉತ್ತರಾಧಿಕಾರಿ ಯಾರಾಗಬಹುದು ಎಂಬ ಬಗ್ಗೆ ಕುತೂಹಲಗಳು ಗರಿಗೆದರಿದ್ದು, ಆರೋಗ್ಯ ಸಚಿವರಾದ ನಿತಿನ್ ಪಟೇಲ್, ಸೌರಭ್ ಪಟೇಲ್, ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯ್ ಭಾಯಿ ರೂಪಾಣಿ, ಕೇಂದ್ರ ಮಂತ್ರಿ ಪುರುಷೋತ್ತಮ ರೂಪಾಲ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಇವರ ಪೈಕಿ ನಿತಿನ್ ಪಟೇಲ್ ಮತ್ತು ಸೌರಭ್ ಪಟೇಲ್ ಅವರು ಹೆಸರು ಮುಂಚೂಣಿಯಲ್ಲಿವೆ. 
ಆನಂದಿ ಬೆನ್ ರಾಜಿನಾಮೆ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಮುಖಂಡರೊಂದಿಗೆ ಸಂಪರ್ಕಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು. 
ಪಟೇಲ್ ಮೀಸಲಾತಿ ಚಳವಳಿ, ದಲಿತ ದೌರ್ಜನ್ಯ ಪ್ರಕರಣಗಳಿಂದಾಗಿ ಗುಜರಾತ್ ನಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಠಿಯಾಗಿದೆ. ಇದರಿಂದಾಗಿ 2017ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರಲಿದ್ದು, ಬಿಜೆಪಿಗೆ ತೀವ್ರ ಸಂಕಷ್ಟ ಎದುರಾಗಿದೆ. ಈ ಮಧ್ಯೆ ಚುನಾವಣೆ ದೃಷ್ಠಿಯಿಂದಾಗಿ ನಾಯಕತ್ವದ ಬದಲಾವಣೆ ಅವಶ್ಯಕತೆ ಹೆಚ್ಚಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರಾಗಿರುವ ಗುಜರಾತ್ ನಲ್ಲಿ ಸದ್ಯ ಆಡಳಿತ ವಿರೋಧಿ ಅಲೆ ಹೆಚ್ಚಾಗಿದ್ದು, ಇದನ್ನು ಮೆಟ್ಟಿ ನಿಲ್ಲುವಂತ ನಾಯಕನ ಆಯ್ಕೆಗೆ ಬಿಜೆಪಿ ಕಸರತ್ತು ನಡೆಸುತ್ತಿದೆ. ಗುಜರಾತ್ ಚುನಾವಣೆ ಮುಂದಿನ ಲೋಕಸಭೆ ಚುನಾವಣೆ ಮೇಲೂ ಪ್ರಭಾವ ಬೀರುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.
ಆನಂದಿ ಬೆನ್ ಪಟೇಲ್ ಅವರು ರಾಜಿನಾಮೆ ನೀಡುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿ ತಮ್ಮ ಫೇಸ್ ಬುಕ್ ಮೂಲಕ ಬಿಜೆಪಿ ಹೈಕಮಾಂಡ್ ಗೆ ಮನವಿ ಮಾಡಿಕೊಂಡಿದ್ದರು. ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆ ಹೊಸ ನಾಯಕತ್ವ ವಹಿಸಿಕೊಳ್ಳುವವರಿಗೆ ಹೆಚ್ಚಿನ ಸಮಯಾವಕಾಶ ಸಿಗಲಿದೆ ಎಂದು ಆನಂದಿ ಬೆನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
SCROLL FOR NEXT