ನವದೆಹಲಿ: ಅತ್ಯಾಚಾರಿಗಳು ಉಗ್ರರಿದ್ದಂತೆ, ಅವರನ್ನು ಸಾರ್ವಜನಿಕವಾಗಿ ಹತ್ಯೆ ಮಾಡಬೇಕು ಎಂದಿರುವ ದೆಹಲಿ ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ ಅವರು, ಆತ್ಯಾಚಾರಿಗಳನ್ನು ಉಗ್ರರೆಂದು ಪರಿಗಣಿಸಿ ಸಾರ್ವಜನಿಕವಾಗಿ ಸಾಯಿಸುವ ಕಾನೂನು ತರಬೇಕು ಎಂದು ಬುಧವಾರ ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶದ ಬುಲಂದ್ ಶೆಹರ್ ಗ್ಯಾಂಗ್ ರೇಪ್ ಬಗ್ಗೆ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಆಪ್ ಸಚಿವ, ಈ ರೀತಿ ಯಾವ ಸಮಯದಲ್ಲೂ, ಯಾರಿಗೆ ಬೇಕಾದರೂ ಆಗಬಹುದು ಎಂದು ಹೇಳಿದ್ದಾರೆ. ಅಲ್ಲದೆ ಇಂತಹ ಘಟನೆಗಳಿಂದ ರಕ್ಷಿಸಿಕೊಳ್ಳಲು ಮಹಿಳೆಯರ ಕೈಗೆ ಶಸ್ತ್ರಾಸ್ತ್ರ ನೀಡಿ, ತರಬೇತಿ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ವರ್ಷ ಸುಮಾರು 450 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ. ನಾನು ಬಹಳ ದಿನಗಳಿಂದ ಗಲ್ಲು ಶಿಕ್ಷೆಯನ್ನು ವಿರೋಧಿಸುತ್ತಿದ್ದೇನೆ. ಆದರೆ ಈಗ ಅತ್ಯಾಚಾರಿಗಳನ್ನು ಉಗ್ರರೆಂದು ಪರಿಗಣಿಸಿ ಸಾರ್ವಜನಿಕವಾಗಿ ಕೊಲೆ ಮಾಡಬೇಕು ಎಂದು ಹೇಳುತ್ತೇನೆ ಎಂದಿದ್ದಾರೆ.
ಮಹಿಳೆಯರು ಮತ್ತು ಬಾಲಕಿಯರ ಕೈಗೆ ಶಸ್ತ್ರಾಸ್ತ್ರ ನೀಡಿ, ತಮ್ಮ ಮೇಲೆ ಅತ್ಯಾಚಾರ ಎಸಗಿದವರನ್ನು ಕೊಲೆ ಮಾಡಲು ಅವಕಾಶ ನೀಡಬೇಕು. ಈ ಸಂಬಂಧ ಸಂಸತ್ ವಿಶೇಷ ಕಾನೂನುನ್ನು ಜಾರಿಗೆ ತರಬೇಕು ಮತ್ತು ಬುಲಂದ್ ಶೆಹರ್ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಸಾಯಿಸಬೇಕು ಎಂದು ಮಿಶ್ರಾ ಬರೆದುಕೊಂಡಿದ್ದಾರೆ.