ಮುಂಬೈ: ಮುಂಬೈ-ಗೋವಾ ಹೆದ್ದಾರಿಯಲ್ಲಿ ಸೇತುವೆ ಕುಸಿತಗೊಂಡ ಪರಿಣಾಮ ನಾಪತ್ತೆಯಾಗಿದ್ದ ಎರಡು ಸರ್ಕಾರಿ ಬಸ್ ಗಳ ಶೋಧಕ್ಕಾಗಿ ಮಹಾರಾಷ್ಟ್ರ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ಬರೊಬ್ಬರಿ 300 ಕೆಜಿ ತೂಕದ ಬೃಹತ್ ಅಯಸ್ಕಾಂತವನ್ನು ನೀರಿಗಿಳಿಸಿದ್ದಾರೆ.
ಬೃಹತ್ ಅಯಸ್ಕಾಂತ ನೀರಿನಲ್ಲಿ ಮುಳಿಗಿರುವ ಲೋಹದ ವಸ್ತುಗಳನ್ನು ಆಕರ್ಷಿಸುತ್ತದೆ. ಈ ವೇಳೆ ನದಿ ನೀರಿನಲ್ಲಿ ಮುಳುಗಿರುವ ಬಸ್ ಗಳನ್ನು ಕೂಡ ಅಯಸ್ಕಾಂತ ಆಕರ್ಷಿಸುತ್ತದೆ ಎನ್ನುವ ಕಾರಣದಿಂದಾಗಿ ಅಧಿಕಾರಗಳು ಈ ಬೃಹತ್ ಅಯಸ್ಕಾಂತವನ್ನು ನೀರಿಗಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಶೋಧ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಯೊಬ್ಬರು, ನೀರಿನಲ್ಲಿ ಬೃಹತ್ ಲೋಹದ ವಸ್ತುವೊಂದು ಅಯಸ್ಕಾಂತಕ್ಕೆ ತಗುಲಿದ್ದು, ಅದು ನೀರಿನಲ್ಲಿ ಮುಳುಗಡೆಯಾದ ಬಸ್ ಆಗಿರಬಹುದು ಎಂದು ಶಂಕಿಸಲಾಗಿದೆ.
ಹೀಗಾಗಿ ಬೃಹತ್ ಕ್ರೇನ್ ಸಹಾಯದಿಂದ ಆ ಲೋಹದ ವಸ್ತುವನ್ನು ಮೇಲೆಕ್ಕೆ ಎತ್ತುವ ಕಾರ್ಯ ನಡೆಸಲಾಗುತ್ತಿದೆ. ಆದರೆ ಸಾವಿತ್ರಿ ನದಿ ನೀರಿನಲ್ಲಿ ವ್ಯಾಪಕ ಪ್ರವಾಹ ಇರುವುದರಿಂದ ಈ ಕಾರ್ಯಕ್ಕೆ ತೀವ್ರ ಅಡಚಣೆಯಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಸೇತುವೆ ದುರಂತ ಪ್ರಕರಣದಲ್ಲಿ ನಾಪತ್ತೆಯಾದವರ ಪೈಕಿ ಈ ವರೆಗೂ 6 ಮಂದಿಯ ಶವ ಪತ್ತೆಯಾಗಿದ್ದು, ಈ ಪೈಕಿ ಸರ್ಕಾರಿ ಬಸ್ ಚಾಲನೆ ಮಾಡುತ್ತಿದ್ದ ಚಾಲಕನ ಮೃತ ದೇಹ ಸೇತುವೆ ಕುಸಿದ ಪ್ರದೇಶದಿಂದ ಸುಮಾರು 100 ಕಿ.ಮೀ ದೂರದಲ್ಲಿ ಸಿಕ್ಕಿದೆ. ನದಿ ನೀರಿನ ಪ್ರವಾಹಕ್ಕೆ ದೇಹ ಕೊಚ್ಚಿಕೊಂಡು ಹೋಗಿದ್ದು, ಪ್ರವಾಹ ತಗ್ಗಿರುವ ಪ್ರದೇಶದಲ್ಲಿ ಚಾಲಕನ ದೇಹಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಇನ್ನುಳಿದ ಮಂದಿಗಾಗಿ ನಡೆಸಲಾಗುತ್ತಿರುವ ಶೋಧ ಕಾರ್ಯ ಕೂಡ ಮುಂದುವರೆದಿದ್ದು, ನೌಕಾಪಡೆಯ ಹೆಲಿಕಾಪ್ಟರ್, ವಿಶೇಷ ಬೋಟ್ ಗಳು ಶೋಧ ಕಾರ್ಯ ನಡೆಸುತ್ತಿವೆ. ಇದಲ್ಲದೆ ನೌಕಾಪಡೆಯ ಉನ್ನತ ಮಟ್ಟದ ನೌಕಾಧಿಕಾರಿಗಳು ಹಾಗೂ ನೌಕಾಪಡೆಯ ನುರಿತ ಮುಳುಗು ತಜ್ಞರು ಸಾವಿತ್ರಿ ನದಿಯಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.