ದೇಶ

ಗುಜರಾತ್ ಸಿಎಂ ಆಗಿ ವಿಜಯ್ ರುಪಾಣಿ ಪ್ರಮಾಣ ವಚನ ಸ್ವೀಕಾರ

Srinivasamurthy VN

ಗಾಂಧಿನಗರ: ಗುಜರಾತ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾಣಿ ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಅವರೊಂದಿಗೆ 24 ಶಾಸಕರು ಸಚಿವರಾಗಿ ಪ್ರಮಾಣ  ವಚನ ಸ್ವೀಕರಿಸಿದ್ದಾರೆ.

ಗಾಂಧಿನಗರದ ಮಹತ್ಮಾ ಮಂದಿರದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಒಪಿ ಕೊಹ್ಲಿ ಅವರು 24 ಸಚಿವರು ಹಾಗೂ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರಿಗೆ  ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಆನಂದಿ ಬೆನ್ ತಂಡದಲ್ಲಿದ್ದ 9 ಮಂದಿ ಸಚಿವರನ್ನು ಕೈಬಿಡಲಾಗಿದ್ದು, 9 ಹೊಸ ಶಾಸಕರಿಗೆ ಸಚಿವರಾಗಿ ಭಡ್ತಿ ನೀಡಲಾಗಿದೆ.  ಕಾರ್ಯಕ್ರಮದಲ್ಲಿ  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ವಿತ್ತ ಸಚಿವ ಅರುಣ್ ಜೇಟ್ಲಿ ಸೇರಿ ಅನೇಕ ನಾಯಕರು ಉಪಸ್ಥಿತರಿದ್ದರು.

70 ವರ್ಷ ವಯಸ್ಸಾದವರು ಅಧಿಕಾರ ಬಿಟ್ಟುಕೊಡಬೇಕೆನ್ನುವ ನೀತಿಯ ಹಿನ್ನೆಲೆಯಲ್ಲಿ ಆನಂದಿಬೆನ್ ಸಿಎಂ ಸ್ಥಾನಕ್ಕೆ ಸ್ವಯಂಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿದ್ದರು. ಆರ್​ಎಸ್​ಎಸ್  ಹಿನ್ನೆಲೆಯಿಂದ ಬಂದಿರುವ 60 ವರ್ಷ ಪ್ರಾಯದ ವಿಜಯ ರೂಪಾಣಿ ಕಳೆದ ಅನೇಕ ಚುನಾವಣೆಗಳಲ್ಲಿ ಪಕ್ಷದ ನಾಯಕತ್ವ ವಹಿಸಿಕೊಂಡು ಯಶಸ್ವಿಯಾದ ಅನುಭವ ಹೊಂದಿದ್ದಾರೆ. ಮೂಲಗಳ  ಪ್ರಕಾರ ಪ್ರಸ್ತುತ ಕೈ ಬಿಡಲಾಗಿರುವ 9 ಸಚಿವರು ಮಾಜಿ ಸಿಎಂ ಆನಂದಿ ಬೆನ್ ಅವರ ಆಪ್ತರು ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎನ್ನುವ  ಮಾತುಗಳು ಕೂಡ ಕೇಳಿಬಂದಿವೆ.

ಪ್ರಮುಖವಾಗಿ ಮಾಜಿ ಸಿಎಂ ಆನಂದಿಬೆನ್ ಅವರ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದ ಸೌರಭ್ ಪಟೇಲ್, ರಮಣ್ ವೋಹ್ರಾ, ರಜಿನಿ ಪಟೇಲ್ ರನ್ನು ಸಂಪುಟದಿಂದ  ಕೈಬಿಡಲಾಗಿದೆ.

SCROLL FOR NEXT