ಕೊಯಮತ್ತೂರು: ಪ್ಯಾರಾ ಸೈಲಿಂಗ್ ಮಾಡುವ ಉಧ್ಯಮಿಯೋರ್ವನ ಹುಚ್ಚು ಆತನ ಸಾವಿಗೆ ಕಾರಣವಾದ ವಿದ್ರಾವಕ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಮಲ್ಲೇಶ್ವರ ರಾವ್ ಎಂಬ ಸುಮಾರು 53 ವರ್ಷದ ಉಧ್ಯಮಿ ಪ್ಯಾರಾ ಸೈಲಿಂಗ್ ಮಾಡುವ ವೇಳೆ ಕೆಳಗೆ ಬಿದ್ದು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 60 ಮೀಟರ್ ಎತ್ತರದಲ್ಲಿ ಹಾರಾಡುತ್ತಿದ್ದ ಮಲ್ಲೇಶ್ವರ ರಾವ್ ಅವರು ಧರಿಸಿದ್ದ ಸುರಕ್ಷಾ ಕವಚ ಕೈಕೊಟ್ಟಿದ್ದರಿಂದಲೇ ಅವರು ಕೆಳಕ್ಕೆ ಬಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಸಿಸಲಾಗಿತ್ತಾದರೂ ಅವರು ಸಾವನ್ನಪ್ಪಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಅಷ್ಟೂ ಘಟನಾವಳಿಯನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏನಿದು ಘಟನೆ?
ನಿನ್ನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಉತ್ಸವ ನಿಮಿತ್ತ ಕೊಡೆಸ್ಸಿಯಾ ಮೈದಾನದಲ್ಲಿ ಪ್ಯಾರಾ ಸೈಲಿಂಗ್ ಕ್ರೀಡೆ ಆಯೋಜಿಸಲಾಗತ್ತು. ಯುವಕರು-ಯುವತಿಯರು ಸೇರಿದಂತೆ ಸಾವಿರಾರು ಮಂದಿ ಮತ್ತು ಅವರ ಪೋಷಕರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅಂತೆಯೇ ಮೃತ ಮಲ್ಲೇಶ್ವರ ರಾವ್ ಕೂಡ ಪ್ಯಾರಾ ಸೈಲಿಂಗ್ ಮಾಡುವ ಉತ್ಸಾಹದಿಂದ ಸುರಕ್ಷಾ ಕವಚ ಧರಿಸಿ ಮೇಲಕ್ಕೆ ಹಾರಿದ್ದಾರೆ. ಆದರೆ ಮೇಲಕ್ಕೆ ಹಾರುತ್ತಿದ್ದಂತೆಯೇ ಅವರ ಸುರಕ್ಷ ಕವಚದ ಬೆಲ್ಟ್ ಗಳು ಕಿತ್ತು ಬಂದಿದ್ದವು.
ಕೂಡಲೇ ಕೂಗಿಕೊಂಡ ಮಲ್ಲೇಶ್ವರ ರಾವ್ ಅವರು, ಸಹಾಯಕ್ಕೆ ಮೊರೆ ಇಟ್ಟರು. ಈ ವೇಳೆ ಅವರು ಸುಮಾರು 60 ಮೀಟರ್ ಎತ್ತರದಲ್ಲಿದ್ದರು. ಪ್ಯಾರಾ ಸೈಲಿಂಗ್ ಆಯೋಜಿಸಿದ್ದ ಸಂಘಟಕರು ಹಾಗೂ ಸಿಬ್ಬಂದಿಗಳು ಮಲ್ಲೇಶ್ವರ ರಾವ್ ಅವರ ರಕ್ಷಿಸಲು ಮುಂದಾದರಾದರೂ ಅಷ್ಟುಹೊತ್ತಿಗಾಗಲೇ ಮಲ್ಲೇಶ್ವರ ರಾವ್ ಅವರು ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಕೊಯಮತ್ತೂರು ಪೊಲೀಸರು ತನಿಖೆ ನಡೆಸುತ್ತಿದ್ದು, ಕಾರ್ಯಕ್ರಮದ ಆಯೋಜಕರು ಹಾಗೂ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ಅಂತೆಯೇ ಮಲ್ಲೇಶ್ವರರಾವ್ ಅವರು ಸಾವನ್ನಪ್ಪುವ ವೇಳೆ ಧರಿಸಿದ್ದ ರಕ್ಷಾ ಕವಚವನ್ನು ಕೂಡ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.