ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ್ದ ಮಹತ್ವದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ತಿದ್ದುಪಡಿ ವಿಧೇಯಕಕ್ಕೆ ಸೋಮವಾರ ಲೋಕಸಭೆ ಅಂಗೀಕಾರ ನೀಡಿದೆ.
ಕಳೆದ ವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದ ಜಿಎಸ್ ಟಿ ತಿದ್ದುಪಡಿ ವಿಧೇಯಕನ್ನು ಅರುಣ್ ಜೇಟ್ಲಿ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದರು. ಬಳಿಕ ತೀವ್ರ ಚರ್ಚೆಯ ನಂತರ ವಿಧೇಯಕವನ್ನು ಮತಕ್ಕೆ ಹಾಕಲಾಯಿತು. ಈ ವೇಳೆ ಸದನದಲ್ಲಿ ಹಾಜರಿದ್ದ ಎಲ್ಲಾ 427 ಸದಸ್ಯರೂ ವಿಧೇಯಕದ ಪರವಾಗಿ ಮತ ಚಲಾಯಿಸಿದರು. ಆದರೆ ಜಿಎಸ್ ಟಿ ವಿರೋಧಿಸಿ ಎಐಎಡಿಎಂಕೆ ಸದಸ್ಯರು ಸದನದಿಂದ ಹೊರ ನಡೆದರು.
ಇದರೊಂದಿಗೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಎಸ್ ಟಿ ವಿಧೇಯಕವನ್ನು ಸರ್ವಾನುಮತದಿಂದ ಅಂಗೀಕರಿಸದಂತಾಗಿದೆ.
ಇದಕ್ಕೂ ಮುನ್ನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಜಿಎಸ್‌ಟಿ ಜಾರಿಯಿಂದಾಗಿ ಟ್ಯಾಕ್ಸ್ ಟೆರರಿಸಂಗೆ ತೆರೆ ಬೀಳಲಿದೆ ಮತ್ತು ಇನ್ನುಮುಂದೆ ಗ್ರಾಹಕನೇ ದೊರೆ ಎಂದು ಹೇಳಿದ್ದರು. ಅಲ್ಲದೆ ಜಿಎಸ್ ಟಿ ವಿಧೇಯಕ ಅಂಗೀಕಾರಕ್ಕೆ ಸಹಕರಿಸಿದ ಎಲ್ಲಾ ರಾಜಕೀಯ ಪಕ್ಷಗಳಿಗೆ ಧನ್ಯವಾದ ಹೇಳಿದ್ದರು.