ಇನ್ಫೋಸಿಸ್ ಸಹ ಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ(ಸಂಗ್ರಹ ಚಿತ್ರ)
ಮುಂಬೈ: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮಹಾತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದಾದ ಸ್ಮಾರ್ಟ್ ಸಿಟಿ ಅಭಿವೃದ್ಧಿ ಕನಸು ನನಸಾಗುವ ನಿಟ್ಟಿನಲ್ಲಿ ನಮ್ಮ ದೇಶ ಬಹಳ ಹಿಂದಿದೆ ಎಂದು ಇನ್ಫೋಸಿಸ್ ಸಹ ಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹೇಳಿದ್ದಾರೆ.
ಮುಂಬೈಯಲ್ಲಿ ಅವರು ತಮ್ಮ ಒಂದು ಗಂಟೆ ಕಾಲದ ನಗರ ವ್ಯವಸ್ಥೆಗಳು ಉಪನ್ಯಾಸದಡಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಏಕೆ ಪ್ರಸ್ತಾಪಿಸಿಲ್ಲ ಎಂದು ಕೇಳಲಾದ ಪ್ರಶ್ನೆಗೆ, ಸ್ಮಾರ್ಟ್ ಸಿಟಿಗಳ ಯೋಜನೆಯಲ್ಲಿ ನಾವು ಬಹಳ ಹಿಂದೆ ಉಳಿದಿರುವುದರಿಂದ ನಾನು ಆ ವಿಷಯದ ಬಗ್ಗೆ ಮಾತನಾಡಲಿಲ್ಲ ಎಂದರು.
ನಾನೊಬ್ಬ ಕೆಲಸಗಾರ, ಕೇವಲ ಮಾತನಾಡುವವನಲ್ಲ ಎಂದು ಹೇಳಿದ ನಾರಾಯಣ ಮೂರ್ತಿ, ಸ್ಮಾರ್ಟ್ ಸಿಟಿ ಎಂದರೆ ಹೇಗಿರಬಹುದು ಎಂದು ತಿಳಿದುಕೊಳ್ಳಲು ನೀವೊಮ್ಮೆ ಕರ್ನಾಟಕದ ಮೈಸೂರಿನಲ್ಲಿರುವ ಇನ್ಫೋಸಿಸ್ ಕ್ಯಾಂಪಸ್ ಗೆ ಭೇಟಿ ನೀಡಿ ಎಂದು ಹೇಳಿದರು.
ಇದಕ್ಕೂ ಮುನ್ನ ಜೆಎಸ್ ಡಬ್ಲ್ಯು ಸಾಹಿತ್ಯ ಲೈವ್ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣ ಮೂರ್ತಿ, ನಗರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ತುಂಬಾ ಇದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಹೂಡಿಕೆ ಮತ್ತು ಪ್ರತಿಭಾವಂತರ ಸಮಾಗಮವನ್ನು ದೂರ ಮಾಡುತ್ತದೆ. ಮುಂಬೈ ನಗರ ಇಂತಹ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಾಕಷ್ಟು ನಲುಗಿಹೋಗಿದೆ ಎಂದರು.
10-12 ವರ್ಷಗಳ ಹಿಂದೆ ಮುಂಬೈಯನ್ನು ಏಷ್ಯಾದ ವಾಣಿಜ್ಯ ಕೇಂದ್ರವನ್ನಾಗಿ ಮಾಡಬೇಕೆಂಬ ಆಶಯವಿತ್ತು. ಆದರೆ ಇಂದು ನಾವು ಆ ಕನಸಿನ ಹತ್ತಿರಕ್ಕೂ ಹೋಗಿಲ್ಲ, ಏಕೆಂದರೆ ಬಂಡವಾಳ ಹೂಡಿಕೆಗಳು ಹರಿದುಬರುತ್ತಿಲ್ಲ. ಪ್ರತಿಭಾವಂತರು ಸಿಗುತ್ತಿಲ್ಲ. ಉತ್ಪಾದನೆ ಕುಸಿತಗೊಂಡು ಬೆಳವಣಿಗೆ ಕುಂಠಿತಗೊಂಡಿದೆ. ಕ್ಯಾನ್ಯರ್ ತೀವ್ರವಾಗಿ ಹಬ್ಬಿರುವಾಗ ನಾವಿನ್ನೂ ಚಿಕಿತ್ಸಾ ಪೆಟ್ಟಿಗೆಯನ್ನೇ ಹಿಡಿದುಕೊಂಡು ಓಡಾಡುತ್ತಿದ್ದೇವೆ ಎಂದರು.
ನಮ್ಮ ದೇಶದ ನಗರಗಳನ್ನು ಅಭಿವೃದ್ಧಿ ಹೊಂದಿದ ದೇಶಗಳ ಜೊತೆ ಹೋಲಿಕೆ ಮಾಡಬಾರದು. ಆದರೆ ಮಾರುಕಟ್ಟೆ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಾದ ಬ್ರೆಜಿಲ್, ಇಂಡೋನೇಷಿಯಾ, ಮಲೇಶಿಯಾ ಮೊದಲಾದ ದೇಶಗಳ ನಗರಗಳನ್ನು ಅಭಿವೃದ್ಧಿಪಡಿಸಲು ತುಂಬಾ ಪ್ರಯತ್ನಪಡುತ್ತಿವೆ. ಅವುಗಳನ್ನು ಅನುಸರಿಸಬೇಕು ಎಂದು ನಾರಾಯಣ ಮೂರ್ತಿ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos