ಮುಂಬೈ: ಮುಂಬೈ-ಗೋವಾ ಹೆದ್ದಾರಿಯ ಮಹಾಡ್ ಸಮೀಪದ ಸೇತುವೆ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದ 2ನೇ ಬಸ್ ಪತ್ತೆಯಾಗಿದ್ದು, ನೌಕಾದಳದ ನುರಿತ ತಜ್ಞರು ಬಸ್ ನ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ.
ಆಗಸ್ಟ್ 2 ರಂದು ಮಹಾರಾಷ್ಟ್ರದ ರಾಯಘಡ ಸಮೀಪದ ಮಹಾಡ್ನಲ್ಲಿ ಮುಂಬೈ-ಗೋವಾ ಹೆದ್ದಾರಿಯಲ್ಲಿ ಸಾವಿತ್ರಿ ನದಿಗೆ ಅಡ್ಡಲಾಗಿ ಬ್ರಿಟೀಷ್ ಕಾಲದಲ್ಲಿ ಕಟ್ಟಲಾಗಿದ್ದ ಸೇತುವೆ ಕುಸಿತ ಪ್ರಕರಣ ಸಂಬಂಧ ಸತತ 10ನೇ ದಿನವೂ ಶೋಧ ಕಾರ್ಯ ಮುಂದುವರೆದಿದ್ದು, ಇಂದು ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ 2ನೇ ಬಸ್ಸಿನ ಅವಶೇಷ ಪತ್ತೆಯಾಗಿದೆ. ನೌಕಾದಳದ ಈಜು ತಜ್ಞರು ದುರಂತ ನಡೆದ ಸುಮಾರು 400 ಮೀಟರ್ ದೂರದಲ್ಲಿ ಬಸ್ ಪತ್ತೆಯಾಗಿದ್ದು, ಬಸ್ ನದಿಯಲ್ಲಿ 5 ಮೀಟರ್ ಆಳದಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ದುರಂತದಲ್ಲಿ ನಾಪತ್ತೆಯಾಗಿದ್ದ ಸುಮಾರು 40 ಮಂದಿಯ ಪೈಕಿ ಈ ವರೆಗೂ 26 ಮಂದಿಯ ಶವಗಳು ಪತ್ತೆಯಾಗಿದ್ದು, ಇಂದಿಗೂ 14 ಮಂದಿಯ ಪತ್ತೆಯೇ ಇಲ್ಲ. ಹೀಗಾಗಿ ಶೋಧ ಕಾರ್ಯಾಚರಣೆ ಮುಂದುವರೆಸಲಾಗಿದೆ. ಆಗಸ್ಟ್ 11 ರಂದು ನಡೆದ ಶೋಧ ಕಾರ್ಯದ ವೇಶೆ ಒಂದು ಬಸ್ಸಿನ ಅವಶೇಷ ಪತ್ತೆಯಾಗಿತ್ತು. ಅದನ್ನು ಕ್ರೇನ್ ಸಹಾಯದಿಂದ ಹೊರಗೆ ತೆಗೆಯಲಾಗಿತ್ತು.
ಪ್ರಸ್ತುತ ಬಸ್ ಮುಳುಗಿರುವ ಪ್ರದೇಶದಲ್ಲಿ ನೀರಿನ ಸೆಳೆತ ಸಾಕಷ್ಟು ಹೆಚ್ಚಾಗಿದ್ದರೂ ಸಹ ನೌಕಾಪಡೆಯ ಯೋಧರು ಬಸ್ಸಿನ ಅವಶೇಷಗಳಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಸಾವಿತ್ರಿ ನದಿಯಲ್ಲಿ ಅಪಾಯಕಾರಿ ಮೊಸಳೆಗಳ ಕಾಟವಿದ್ದುದ್ದರಿಂದ ಮತ್ತು ಪ್ರವಾಹದ ನೀರಿನ ರಭಸ ಜಾಸ್ತಿ ಇದ್ದುದರಿಂದ ಈಜು ತಜ್ಞರ ಶೋಧವನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಮತ್ತೆ ಈಜು ತಜ್ಞರನ್ನು ನೀರಿಗಿಳಿಸಿ ಶೋಧ ನಡೆಸಿದ ವೇಳೆ ನದಿಯ ಸುಮಾರು 5 ಮೀಟರ್ ಆಳದಲ್ಲಿ ಬಸ್ನ ಅವಶೇಷ ಪತ್ತೆಯಾಗಿದೆ.