ದೇಶ

ಪ್ರಾಮಾಣಿಕತೆಗೆ ಸಿಕ್ಕ ಬೆಲೆ; 29 ವರ್ಷಗಳ ನಂತರ ಭದ್ರತಾ ಸಿಬ್ಬಂದಿಗೆ ಬಡ್ತಿ ನೀಡಿದ ಏರ್ ಇಂಡಿಯಾ!

Sumana Upadhyaya
ನವದೆಹಲಿ: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ತನ್ನ ಭದ್ರತಾ ಸಿಬ್ಬಂದಿಗೆ ವೃತ್ತಿಯ ಘನತೆ ಕಾಪಾಡಿ ಪ್ರಾಮಾಣಿಕತೆ ಮೆರೆದದ್ದಕ್ಕಾಗಿ 29 ವರ್ಷಗಳ ಸೇವೆಯ ನಂತರ ಬಡ್ತಿ ನೀಡಿದೆ. ಏರ್ ಇಂಡಿಯಾ ಇತಿಹಾಸದಲ್ಲಿಯೇ ಪ್ರಾಮಾಣಿಕತೆ ಮೇಲೆ ಸಿಬ್ಬಂದಿಯೊಬ್ಬರಿಗೆ ಬಡ್ತಿ ನೀಡುತ್ತಿರುವುದು ಇದೇ ಮೊದಲು.
ಏರ್ ಇಂಡಿಯಾದ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸುಭಾಷ್ ಚಂದರ್ ಅವರನ್ನು ಭದ್ರತಾ ಆಫೀಸರ್ ಆಗಿ ಬಡ್ತಿ ನೀಡಲಾಗಿದೆ. ಅದು ಇಷ್ಟು ವರ್ಷ ಅವರು ಕೆಲಸದಲ್ಲಿ ತೋರಿದ ಸತ್ಯ, ನಿಷ್ಠತೆಗಾಗಿ ಎಂದು ಏರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಸ್ವಿನಿ ಲೊಹನಿ ತಿಳಿಸಿದ್ದಾರೆ.
ನಿನ್ನೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆದ ಸಮಾರಂಭದಲ್ಲಿ ಸುಭಾಷ್ ಚಂದರ್ ಗೆ ರ್ಯಾಂಕ್ ಆಫೀಸರ್, ಭದ್ರತಾ ವಿಭಾಗದ ಹುದ್ದೆ ನೀಡಿ ಗೌರವಿಸಲಾಯಿತು ಎಂದು ಸಂಸ್ಥೆಯ ಅಧಿಕೃತ ಹೇಳಿಕೆ ತಿಳಿಸಿದೆ.
ವಿಜ್ಞಾನ ಪದವೀಧರನಾಗಿರುವ ಸುಭಾಷ್ ಚಂದರ್ ತಮ್ಮ ಸೇವೆಯಲ್ಲಿ ಅನೇಕ ಸಲ ಪ್ರಯಾಣಿಕರು ಬಿಟ್ಟು ಹೋಗಿದ್ದ ಬೆಲೆ ಬಾಳುವ ವಸ್ತುಗಳು, ಹಣ ಮೊದಲಾದವುಗಳನ್ನು ಮರಳಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ತಮ್ಮ ವಸ್ತು ಸಿಗುವಲ್ಲಿಯವರೆಗೆ ಅದು ಕಳೆದುಹೋಗಿದೆ ಎಂದು ಗೊತ್ತಾಗಿಲ್ಲದೆ ಇದ್ದ ಸಂದರ್ಭಗಳೂ ಇವೆ. 
ಇಂತಹ ಪ್ರಕರಣವೊಂದರಲ್ಲಿ, ಈ ವರ್ಷ ಜೂನ್ ನಲ್ಲಿ ಹಾಂಕ್ ಗಾಂಗ್ ನಿಂದ ಬಂದ ವಿಮಾನವನ್ನು ತಪಾಸಣೆ ಮಾಡುತ್ತಿದ್ದಾಗ ಪರ್ಸ್ ವೊಂದರಲ್ಲಿ ವಿದೇಶಿ ಕರೆನ್ಸಿಯ 5 ಲಕ್ಷ ರೂಪಾಯಿ ಸಿಕ್ಕಿತ್ತು. ಅದನ್ನು ಪ್ರಯಾಣಿಕರಿಗೆ ಹಿಂತಿರುಗಿಸಲಾಯಿತು. ಆಗಸ್ಟ್ 25, 2003ರಲ್ಲಿ ಭೋಪಾಲ್ ನಿಂದ ಬಂದ ಸೌದಿ ಅರೇಬಿಯಾದ ಪ್ರಯಾಣಿಕರೊಬ್ಬರು ಚಿನ್ನವನ್ನು ಬಿಟ್ಟು ಹೋಗಿದ್ದರು. ಅದು ಚಂದರ್ ಅವರ ಕಣ್ಣಿಗೆ ಬಿದ್ದು ಮರಳಿಸಿದ್ದಾರೆ. 
SCROLL FOR NEXT