ಇಸ್ಲಾಮಾಬಾದ್: ಬಲೂಚಿಸ್ತಾನದ ಸ್ವಾತಂತ್ರ್ಯದ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗೆ ಯಾರೂ ಬೆಂಬಲ ಸೂಚಿಸಿಲ್ಲ ಎಂದು ಬಲೂಚಿಸ್ತಾನದ ಮುಖ್ಯಮಂತ್ರಿ ಸನಾವುಲ್ಲಾ ಝೆಹ್ರಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬಲೂಚಿಸ್ತಾನದ ಬಗ್ಗೆ ನೀಡಿರುವ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಬಲೂಚಿಸ್ತಾನದಲ್ಲಿ ಯಾರೂ ಮೋದಿ ಅವರ ಹೇಳಿಕೆಗೆ ಬೆಂಬಲ ನೀಡಿಲ್ಲ. ಕಾಶ್ಮೀರದ ಸ್ವಾತಂತ್ರ್ಯ ಹೋರಾಟಕ್ಕೂ ಬಲೂಚಿಸ್ಥಾನದಲ್ಲಿದೆ ಎನ್ನಲಾಗುತ್ತಿರುವ ಸ್ವಾತಂತ್ರ್ಯ ಹೋರಾಟಕ್ಕೂ ಹೋಲಿಕೆ ಸರಿಯಲ್ಲ ಎಂದು ಝೆಹ್ರಿ ಹೇಳಿದ್ದಾರೆ.
ಸರ್ವಪಕ್ಷ ಸಭೆಯಲ್ಲಿ ಉಲ್ಲೇಖಿಸಲಾಗಿದ್ದ ಬಲೂಚಿಸ್ತಾನದ ಸ್ವಾತಂತ್ರ್ಯದ ಬಗ್ಗೆ ಉಲ್ಲೇಖಿಸಿದ್ದಕ್ಕೆ, ಬಲೂಚಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರದ ಜನತೆ ತಮಗೆ ಧನ್ಯವಾದ ಅರ್ಪಿಸುತ್ತಿದ್ದಾರೆ ಎಂದು ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಕಾಶ್ಮೀರದಲ್ಲಿ ಸ್ವಇಚ್ಛೆಯಿಂದ ಜನರು ಪ್ರತ್ಯೇಕವಾಗಲು ಬಯಸುತ್ತಿದ್ದಾರೆ. ಆದರೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸಣ್ಣ ಗುಂಪೊಂದು ಮಾತ್ರ ಪಾಕಿಸ್ತಾನದ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿದ್ದು ಸ್ವಾತಂತ್ರ್ಯಕ್ಕಾಗಿ ಬೇಡಿಕೆ ಇಡುತ್ತಿದೆ ಎಂದು ಬಲೂಚಿಸ್ತಾನದ ಮುಖ್ಯಮಂತ್ರಿ ಸನಾವುಲ್ಲಾ ಝೆಹ್ರಿ ತಿಳಿಸಿದ್ದಾರೆ.