ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)
ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ನವಜೋತ್ ಸಿಂಗ್ ಸಿಧು ಅವರು ಸೇರುವ ಸಾಧ್ಯತೆಯ ಕುರಿತು ಕೇಳಿಬರುತ್ತಿರುವ ವದಂತಿಗಳಿಗೆ ನಿರ್ಣಾಯಕ ಕೊನೆ ಹಾಡಲು ನಿರ್ಧರಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಿಧು ತಮ್ಮ ಪಕ್ಷಕ್ಕೆ ಸೇರಲು ಯಾವುದೇ ಪೂರ್ವ ಷರತ್ತುಗಳನ್ನು ವಿಧಿಸಿಲ್ಲ ಮತ್ತು ಯೋಚಿಸಿ ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಸ್ವಲ್ಪ ಸಮಯ ಬೇಕಾಗಿದೆ ಎಂದಿದ್ದಾರೆ.
ಈ ಬಗ್ಗೆ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಅವರು, ಕ್ರಿಕೆಟ್ ದಂತಕಥೆ ಸಿಧು ಬಗ್ಗೆ ತಮಗೆ ಅಪಾರ ಗೌರವವಿದೆ. ಕಳೆದ ಶುಕ್ರವಾರ ಸಿಧು ತಮ್ಮ ನಿವಾಸಕ್ಕೆ ಬಂದಿದ್ದು, ಅವರು ಆಪ್ ಗೆ ಸೇರಿದರೂ, ಸೇರದಿದ್ದರೂ ಕೂಡ ಅವರ ಮೇಲಿನ ಗೌರವ ಕಡಿಮೆಯಾಗುವುದಿಲ್ಲ, ಹಾಗೆಯೇ ಇರುತ್ತದೆ ಎಂದು ಹೇಳಿದ್ದಾರೆ.
ಪಂಜಾಬ್ ರಾಜ್ಯ ಚುನಾವಣೆಯಲ್ಲಿ ನವಜೋತ್ ಸಿಂಗ್ ಸಿಧು ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಾರೆಯೇ, ಇಲ್ಲವೇ ಎಂದು ಹೇಳಲು ಈ ಹಂತದಲ್ಲಿ ಸಾಧ್ಯವಿಲ್ಲ ಎಂದರು.
ಸಿಧು ಯಾವುದೇ ಪೂರ್ವಷರತ್ತುಗಳನ್ನು ಹಾಕಿಲ್ಲ. ಅವರಿಗೆ ಯೋಚಿಸಲು ಸಮಯ ಬೇಕಾಗಿದೆ.
ಅದನ್ನು ನಾವು ಗೌರವಿಸೋಣ. ಅವರೊಬ್ಬ ಕ್ರಿಕೆಟ್ ದಂತಕಥೆಯಾಗಿದ್ದು, ಒಬ್ಬ ಉತ್ತಮ ವ್ಯಕ್ತಿ. ಅವರ ಬಗ್ಗೆ ನನಗಿರುವ ಗೌರವ ಮುಂದುವರಿಯಲಿದೆ ಎಂದು ಸರಣಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ಕಳೆದ ತಿಂಗಳು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ 52 ವರ್ಷದ ನವಜೋತ್ ಸಿಂಗ್ ಸಿಧು ಆಪ್ ಪಕ್ಷಕ್ಕೆ ಸೇರುತ್ತಾರೆಂಬ ವದಂತಿ ಮಧ್ಯೆ ಕೇಜ್ರಿವಾಲ್ ಅವರ ಈ ಹೇಳಿಕೆ ಸಂಪೂರ್ಣ ವ್ಯತಿರಿಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics