ನವದೆಹಲಿ: ಭಾರಿ ಭದ್ರತೆ ಇರುವ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಓ) ಭವನದಲ್ಲೇ ಎರಡು ತಿಂಗಳ ಹಿಂದಷ್ಟೇ ಜೀವಂತ ಬಾಂಬ್ ಪತ್ತೆಯಾಗಿತ್ತು ಮತ್ತು ಅದನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿ(ಎನ್ಎಸ್ಜಿ) ನಿಷ್ಕ್ರಿಯಗೊಳಿಸಿದ್ದರು ಎಂದು ಎನ್ಎಸ್ಜಿ ಮುಖ್ಯಸ್ಥ ಆರ್ ಸಿ ತಾಯಲ್ ಮಂಗಳವಾರ ಹೇಳಿದ್ದಾರೆ. ಆದರೆ ಅದು ಪುರಾತನದ ಕಾಲದ ಬಾಂಬ್ ಮತ್ತು ಹಳೆ ಕಚೇರಿಯಲ್ಲಿ ಎಂದು ಹೇಳಿ ಅಚ್ಚರಿ ಮೂಡಿಸಿದರು.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತಾಯಲ್ ಅವರು, ಕೆಲ ತಿಂಗಳ ಹಿಂದೆ ನಡೆದ ಘಟನೆಯಲ್ಲಿ ಭಯೋತ್ಪಾದನೆ ನಿಗ್ರಹ ದಳವು ಸುಧಾರಿತ ಸ್ಪೋಟಕದ ಸಂಕಷ್ಟ ಕ್ಷಣದಿಂದ ಡಿಆರ್ಡಿಓವನ್ನು ಪಾರು ಮಾಡಿತ್ತು ಎಂದು ಅವರು ಹೇಳಿದರು.
ಇದೇ ವೇಳೆ ಎನ್ಎಸ್ಜಿ ಸಿಬ್ಬಂದಿಯ ಸಾಹಸ ಹೊಗಳಿದ ತಾಯಲ್ ಬೇರಾರಿಗೂ ಬಾಂಬ್ ನಿಷ್ಕ್ರಿಯಗೊಳಿಸಲು ಸಾಧ್ಯವಾಗದೇ ಹೋದಾಗ ಎನ್ಎಸ್ಜಿ ಬಾಂಬ್ ನಿಷ್ಕ್ರಿಯಗೊಳಿಸಿ ಸಾಹಸ ಮೆರೆದಿದೆ ಎಂದು ನುಡಿದರು.
ಈ ಸ್ಪೋಟಕ ಫಿರಂಗಿ ಸ್ಪೋಟವಾಗದೆ ಜೀವಂತವಾಗಿತ್ತು ಎಂದು ತಿಳಿಸಿರುವ ಎನ್ಎಸ್ಜಿ ಅಧಿಕಾರಿಗಳು, ದೆಹಲಿ ಮೆಟ್ರೋ ಕಾಮಗಾರಿ ಕೆಲಸಕ್ಕೆ ಡಿಆರ್ಡಿಓ ಆವರಣದಲ್ಲಿ ನೆಲ ಅಗೆಯುತ್ತಿದ್ದಾಗ ಸ್ಪೋಟಕ ದೊರೆತಿತ್ತು. ಸ್ಥಳೀಯ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದವರಿಗೆ ಅದನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗಲಿಲ್ಲ. ಆಗ ಎನ್ಎಸ್ಜಿ ಈ ಕೆಲಸ ಮಾಡಿತು ಎಂದು ಹೇಳಿದರು.