ನವದೆಹಲಿ: ಮಹಾತ್ಮಾ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ತಾವು ಆರ್ ಎಸ್ ಎಸ್ ಸಂಘಟನೆಯನ್ನು ಎಲ್ಲಿಯೂ ದೂಷಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ರಾಹುಲ್ ಗಾಂಧಿ ನೀಡಿರುವ ಸ್ಪಷ್ಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ರಾಹುಲ್ ಗಾಂಧಿಯದ್ದು ಯು-ಟರ್ನ್ ಆದರೂ ಗುಡ್ ಟರ್ನ್ ಎಂದು ಹೇಳಿದ್ದಾರೆ.
ಗಾಂಧಿ ಹತ್ಯೆ ಪ್ರಕರಣದಲ್ಲಿ ಆರ್ ಎಸ್ ಎಸ್ ಸಂಘಟನೆಯನ್ನು ದೂಷಿಸಿಲ್ಲ ಎಂದು ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಗೆ ಹೇಳಿರುವುದು ಒಳ್ಳೆಯ ವಿಚಾರವಾಗಿದ್ದು ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ರಾಹುಲ್ ಗಾಂಧಿಯ ಸ್ಪಷ್ಟನೆಯಿಂದ ಬುದ್ಧಿವಂತಿಕೆಗೆ ಜಯವಾಗಿದೆ, ಆರ್ ಎಸ್ ಎಸ್ ದೇಶಭಕ್ತ ಸಂಘಟನೆಯಾಗಿದ್ದು ಯಾವುದೇ ಸಮಯದಲ್ಲೂ ಸೇವೆಗೆ ಸಿದ್ಧವಾಗಿರುತ್ತದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಹತ್ಯೆಯಾ ವಿಚಾರವನ್ನು ಉಲ್ಲೇಖಿಸಿ ಆರ್ ಎಸ್ ಎಸ್ ನ್ನು ದೂಷಿಸಿದ್ದಕ್ಕಾಗಿ ಆರ್ ಎಸ್ ಎಸ್ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿತ್ತು. ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಆರ್ ಎಸ್ ಎಸ್ ನ ಕ್ಷಮೆ ಕೇಳುವಂತೆ ಇಲ್ಲವೇ ತಮ್ಮ ಆರೋಪವನ್ನು ಸಾಬೀತುಪಡಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಗೆ ಸ್ಪಷ್ಟನೆ ನೀಡಿದ್ದ ರಾಹುಲ್ ಗಾಂಧಿ ತಾವು ಗಾಂಧಿ ಹತ್ಯೆಗೆ ಆರ್ ಎಸ್ ಎಸ್ ನ್ನು ದೂಷಿಸಿಲ್ಲ, ಭಾಷಣದ ಹೇಳಿಕೆಯನ್ನು ಆರ್ ಎಸ್ ಎಸ್ ಗೂ ಮಹಾತ್ಮಾ ಗಾಂಧಿ ಹತ್ಯೆಗೂ ಸಂಬಂಧ ಕಲ್ಪಿಸಲಾಗಿದೆ ಎಂದು ಹೇಳಿದ್ದರು.