ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆ 23 ವರ್ಷದ ಮಧ್ಯಪ್ರದೇಶದ ಯುವಕನೋರ್ವನನ್ನು ಸೇನೆಯ ನೇಮಕಾತಿಯಿಂದ ಅನರ್ಹಗೊಳಿಸಲಾಗಿದೆ.
ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಯಾಗಿರುವ 23 ವರ್ಷದ ಯುವಕ ಸೌರಭ್ ಬಿಲ್ಗಾಯನ್, ಎದೆಯ ಮೇಲೆ ಮೋದಿ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಅವರ ಹೆಸರು ಸೂರ್ಯ ಚಂದ್ರರಿರುವವರೆಗೂ ಇರುತ್ತದೆ ಎಂದು ಬರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸೇನೆಗೆ ನಡೆಯುವ ನೇಮಕಾತಿ ವೇಳೆ ಆತನನ್ನು ಅನರ್ಹಗೊಳಿಸಲಾಗಿದೆ.
ಸೌರಭ್ ಈ ಹಿಂದೆಯೂ ಹಲವು ಬಾರಿ ಸೇನೆ ಸೇರಲು ಯತ್ನಿಸಿದ್ದರಾದರು ಎದೆಯ ಸುತ್ತಳತೆ ಮಾಪನ ಮಾಡುವಾಗ ಮೋದಿ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಅವರ ಪರವಾದ ಟ್ಯಾಟೂ ಕಂಡಿರುವುದರಿಂದ ಅನರ್ಹಗೊಳಿಸಲಾಗಿದೆ ಎಂದು ಸೌರಭ್ ಆರೋಪಿಸಿದ್ದಾರೆ.
2014 ರಲ್ಲಿ ಪುಣೆಯಲ್ಲಿ ಸೇನೆ ಸೇರಲು ಹೋದೆ ಆದರೆ ಅಲ್ಲಿ ನನ್ನನ್ನು ಅನರ್ಹಗೊಳಿಸಲಾಯಿತು. ನಂತರದ ಪ್ರಯತ್ನಗಳಲ್ಲೂ ಇದೆ ಮುಂದುವರೆಯಿತು ಎಂದು ಸೌರಭ್ ಹೇಳಿದ್ದಾರೆ. ಸತತವಾಗಿ ತಾನು ಸೇನೆ ಸೇರಿಕೊಳ್ಳುವುದಕ್ಕೆ ಅನರ್ಹಗೊಳ್ಳುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡುವುದಾಗಿ ಸೌರಭ್ ತಿಳಿಸಿದ್ದಾರೆ. ಈಗಾಗಲೇ ಮಧ್ಯಪ್ರದೇಶದ ಸಚಿವರು, ಶಾಸಕರ ಮೂಲಕ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಲು ಯತ್ನಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸೌರಭ್ ಹೇಳಿದ್ದಾರೆ.