ದೇಶ

ನನ್ನ ದೃಷ್ಟಿಯಲ್ಲಿ ಭಾರತಕ್ಕೆ ಕ್ಷಿಪ್ರ ರೂಪಾಂತರ ಬೇಕು, ಕ್ರಮೇಣ ವಿಕಾಸವಲ್ಲ: ನರೇಂದ್ರ ಮೋದಿ

Sumana Upadhyaya
ನವದೆಹಲಿ: ಭಾರತದ ಕ್ಷಿಪ್ರ ರೂಪಾಂತರದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಸ್ಪಷ್ಟವಾಗಿ ಪ್ರತಿಪಾದಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾನೂನನ್ನು ಬದಲಾಯಿಸುವ ಅಗತ್ಯವಿದೆ. ಕೇವಲ ದೇಶದ ಪ್ರಗತಿಯ ಏರಿಕೆಯನ್ನು ಮಾತ್ರ ನೋಡದೆ ಅನಗತ್ಯ ಕಾರ್ಯವಿಧಾನಗಳನ್ನು ತೆಗೆದುಹಾಕಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕೆಂದು ಅವರು ಹೇಳಿದರು.
ಬದಲಾವಣೆಯ ಸವಾಲನ್ನು ಭಾರತ ಎದುರಿಸಬೇಕಾದರೆ ಕೇವಲ ಪ್ರಗತಿ ಹೊಂದಿದರೆ ಸಾಲದು. ರೂಪ ಪರಿವರ್ತನೆ ಅಗತ್ಯ. ಹಾಗಾಗಿ ನನ್ನ ದೃಷ್ಟಿಕೋನದಲ್ಲಿ ಭಾರತ ವೇಗವಾಗಿ ರೂಪಾಂತರ ಹೊಂದಬೇಕು, ನಿಧಾನ ಬೆಳವಣಿಗೆಯಾದರೆ ಸಾಲದು ಎಂದು ಹೇಳಿದರು. ಅವರು ಇಂದು ದೆಹಲಿಯಲ್ಲಿ ನೀತಿ ಆಯೋಗ ಆಯೋಜಿಸಿದ್ದ ಭಾರತದ ಮೊದಲ ರೂಪಾಂತರ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು.
ಆಡಳಿತದ ರೂಪಾಂತರ ಮೂಲಕ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಅದು 19ನೇ ಶತಮಾನದ ಆಡಳಿತ ವಿಧಾನದಿಂದ ಸಾಧ್ಯವಿಲ್ಲ. ಜನರ ಮನೋಭಾವನೆಯಲ್ಲಿ ರೂಪಾಂತರವಾಗದೆ ಆಡಳಿತದಲ್ಲಿ ರೂಪಾಂತರ ಸಾಧ್ಯವಿಲ್ಲ. ಪರಿವರ್ತಕ ಕಲ್ಪನೆಗಳಿಲ್ಲದೆ ಮನಸ್ಸು ರೂಪಾಂತರವಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ನಾವು ಕಾನೂನಿನಲ್ಲಿ ಬದಲಾವಣೆ ತರಬೇಕು. ಅನಗತ್ಯ ಪ್ರಕ್ರಿಯೆಗಳನ್ನು ತೆಗೆದುಹಾಕಿ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು ಮತ್ತು ತಂತ್ರಜ್ಞಾನವನ್ನು ಅಳವಡಿಸಬೇಕು. ನಾವು 21ನೇ ಶತಮಾನದಲ್ಲಿ ಸಾಧನೆ ಮಾಡಲು 19ನೇ ಶತಮಾನದ ಆಡಳಿತ ವ್ಯವಸ್ಥೆಯನ್ನು ಅನುಸರಿಸಿದರೆ ಆಗುವುದಿಲ್ಲ ಎಂದರು.
ಕೇಂದ್ರ ಸರ್ಕಾರದ ಹೆಚ್ಚಿನ ಸಚಿವರು ಹಾಜರಿದ್ದ ಉಪನ್ಯಾಸದಲ್ಲಿ ಬದಲಾವಣೆ ಬಾಹ್ಯ ಮತ್ತು ಆಂತರಿಕ ಕಾರಣಗಳಿಗಾಗಿ ಆಗಬೇಕು ಎಂದರು. ಪ್ರತಿ ದೇಶ ತನ್ನದೇ ಆದ ಅನುಭವ, ಸಂಪತ್ತು ಮತ್ತು ಶಕ್ತಿಯನ್ನು ಹೊಂದಿರುತ್ತದೆ. 30 ವರ್ಷಗಳ ಹಿಂದೆ ದೇಶಕ್ಕೆ ಆಂತರಿಕವಾಗಿ ಅವಲೋಕಿಸಿ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗುತ್ತಿತ್ತು. ಇಂದು, ದೇಶಗಳು ಅಂತರ ಅವಲಂಬನೆ ಮತ್ತು ಅಂತರ ಸಂಬಂಧವನ್ನು ಹೊಂದಿವೆ. ಯಾವುದೇ ದೇಶ ಒಂಟಿಯಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಪ್ರತಿಯೊಂದು ದೇಶ ಜಾಗತಿಕ ಮಟ್ಟದಲ್ಲಿ ತನ್ನ ಚಟುವಟಿಕೆಯಲ್ಲಿ ಸಾಧನೆ ಮಾಡಬೇಕು ಇಲ್ಲದಿದ್ದರೆ ಹಿಂದೆ ಬೀಳುತ್ತದೆ ಎಂದು ಪ್ರಧಾನಿ ಹೇಳಿದರು.
ಆಂತರಿಕ ಕಾರಣಗಳಿಗೆ ಕೂಡ ಬದಲಾವಣೆ ಮುಖ್ಯ. ಯುವ ಜನಾಂಗ ತುಂಬಾ ವಿಭಿನ್ನವಾಗಿ ಯೋಚಿಸಿ ಮಹಾತ್ವಾಕಾಂಕ್ಷೆಯನ್ನು ಹೊಂದಿರುವುದರಿಂದ ಸರ್ಕಾರ ತನ್ನ ಹಳೆ ಸೂತ್ರಕ್ಕೆ ಅಂಟಿಕೊಂಡು ಕೂತಿರಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಠಾತ್ ಆಘಾತ ಅಥವಾ ಬಿಕ್ಕಟ್ಟಿನಿಂದ ಆಡಳಿತಾತ್ಮಕ ಮನೋವೃತ್ತಿಯಲ್ಲಿ ಮೂಲಭೂತ ಬದಲಾವಣೆಯಾಗುತ್ತದೆ. ಭಾರತದಲ್ಲಿ ಸ್ಥಿರ ಪ್ರಜಾಪ್ರಭುತ್ವ ರಾಜ್ಯ ವ್ಯವಸ್ಥೆಯಿಂದ ರೂಪಾಂತರ ಬದಲಾವಣೆ ತರಲು ವಿಶೇಷ ಪ್ರಯತ್ನ ಮಾಡಬೇಕು. ವ್ಯಕ್ತಿಗತವಾಗಿ ಹೊಸ ಆಲೋಚನೆಗಳು ಪುಸ್ತಕ ಓದುವುದರಿಂದ ಬರಬಹುದು. ನಮ್ಮ ಮನಸ್ಸಿನ ಕಿಟಕಿಗಳನ್ನು ಪುಸ್ತಕಗಳು ತೆರೆಯುತ್ತವೆ. ಅದಾಗ್ಯೂ ನಾವು ಸಾಮೂಹಿಕವಾಗಿ ಬುದ್ದಿಮತ್ತೆಯನ್ನು ಉಪಯೋಗಿಸದಿದ್ದರೆ ಆಲೋಚನೆಗಳು ವೈಯಕ್ತಿಕ ಮನಸ್ಸಿಗೆ ಸೀಮಿತಗೊಳ್ಳುತ್ತದೆ ಎಂದು ಪ್ರಧಾನಿ ಹೇಳಿದರು.
SCROLL FOR NEXT