ನವದೆಹಲಿ: ಬ್ಯಾಂಕ್ ಗ್ಯಾರಂಟಿಗಾಗಿ ಸೆಬಿಗೆ ಹೆಚ್ಚುವರಿ 300 ಕೋಟಿ ರುಪಾಯಿ ನೀಡಲು ತಾವು ಸಿದ್ಧವಿರುವುದಾಗಿ ಸಹಾರ ಗ್ರೂಪ್ ಮುಖ್ಯಸ್ಥ ಹಾಗೂ ಬಹುಕೋಟಿ ಹಗರಣದ ಆರೋಪಿ ಸುಬ್ರತಾ ರಾಯ್ ಅವರು ಶುಕ್ರವಾರ ಸುಪ್ರೀಂಕೋರ್ಟ್ಗೆ ತಿಳಿಸಿದ್ದಾರೆ.
ಈ ಹಿಂದೆ ಸುಬ್ರತಾ ರಾಯ್ ಪೆರೋಲ್ ಅವಧಿಯನ್ನು ಮತ್ತೆ ವಿಸ್ತರಿಸಿದ್ದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಸುಪ್ರೀಂ ಪೀಠ ಹೆಚ್ಚುವರಿಯಾಗಿ 300 ಕೋಟಿ ರುಪಾಯಿಯನ್ನು ಆಗಸ್ಟ್ 3ರೊಳಗೆ ಜಮಾ ಮಾಡುವಂತೆ ಸೂಚಿಸಿತ್ತು. ಈ ಸಂಬಂಧ ಇಂದು ನಡೆದ ವಿಚಾರಣೆ ವೇಳೆ ಆರೋಪಿ ಪರ ವಕೀಲ ಕಪಿಲ್ ಸಿಬಲ್ ಅವರು ತಮ್ಮ ಕಕ್ಷಿದಾರ ಹೆಚ್ಚುವರಿಯಾಗಿ 300 ಕೋಟಿ ರುಪಾಯಿ ನೀಡಲು ಸಿದ್ಧರಿದ್ದಾರೆ. ಆದರೆ ಈ ಹಣವನ್ನು ಬ್ಯಾಂಕ್ ಗ್ಯಾರಂಟಿಯಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ತಾಯಿ ನಿಧನದ ಹಿನ್ನೆಲೆಯಲ್ಲಿ ಕಳೆದ ಮೇ 6ರಂದು ರಾಯ್ ಯನ್ನು ಪೆರೋಲ್ ಮೇಲೆ ಕೋರ್ಟ್ ಬಿಡುಗಡೆ ಮಾಡಿತ್ತು. ಬಳಿಕ ಅದನ್ನು ಮತ್ತೆ ಎರಡು ತಿಂಗಳ ಕಾಲ ವಿಸ್ತರಿಸಿತ್ತು.
ವಸತಿ ಯೋಜನೆ ಹೆಸರಿನಲ್ಲಿ ಸಾರ್ವಜನಿಕ ಹೂಡಿಕೆದಾರರನ್ನು ವಂಚಿಸಿ, ಹೂಡಿಕೆ ಹಣ ಹಿಂದಿರುಗಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜಾಮೀನುರಹಿತ ವಾರಂಟ್ ಹೊರಡಿಸಿ, ಬಂಧನಕ್ಕೆ ಆದೇಶಿಸಿತ್ತು. ಇದಾದ ಬಳಿಕ 2 ದಿನಗಳಿಂದ ತಲೆ ಮರೆಸಿಕೊಂಡಿದ್ದ 65 ವರ್ಷದ ಸುಬ್ರತಾ ರಾಯ್ ಬಳಿಕ ಲಕ್ನೋದಲ್ಲಿ ಪೊಲೀಸರ ಎದುರು ಶರಣಾಗಿ ಜೈಲುಪಾಲಾಗಿದ್ದರು.