ದೇಶ

ಸ್ಕರ್ಟ್ ಧರಿಸಬೇಡಿ, ಒಬ್ಬೊಬ್ರೇ ಓಡಾಡಬೇಡಿ: ವಿದೇಶಿ ಮಹಿಳಾ ಪ್ರವಾಸಿಗರಿಗೆ ಕೇಂದ್ರ ಸಚಿವ ಮಹೇಶ್ ಶರ್ಮ ಸಲಹೆ

Sumana Upadhyaya
ನವದೆಹಲಿ: ನೀವು ಸ್ಕರ್ಟ್ ಧರಿಸಬೇಡಿ..ರಾತ್ರಿ ಹೊತ್ತು ಒಬ್ಬೊಬ್ಬರೇ ಓಡಾಡಬೇಡಿ. ಹೀಗೊಂದು ಸಲಹೆಯನ್ನು ಕೇಂದ್ರ ಸಾಂಸ್ಕೃತಿಕ ಸಚಿವ ಮಹೇಶ್ ಶರ್ಮ ನೀಡಿದ್ದಾರೆ. ಅದು ಭಾರತಕ್ಕೆ ಬರುವ ವಿದೇಶಿ ಮಹಿಳಾ ಪ್ರವಾಸಿಗರಿಗೆ.
''ಪ್ರವಾಸಿಗರು ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅವರಿಗೆ ಸ್ವಾಗತ ಕಿಟ್ ನ್ನು ನೀಡಲಾಗುತ್ತದೆ. ಅದರಲ್ಲಿ ಏನು ಮಾಡಬಹುದು, ಏನು ಮಾಡಬಾರದು ಎಂಬ ಬಗ್ಗೆ ವಿವರಿಸಲಾಗಿದೆ. ಪ್ರವಾಸಿಗರು ಸಣ್ಣ ನಗರಗಳಲ್ಲಿ ಸುತ್ತಾಡುತ್ತಿದ್ದರೆ ರಾತ್ರಿ ವೇಳೆ ಒಬ್ಬೊಬ್ಬರೇ ತಿರುಗಾಡಬಾರದು ಮತ್ತು ಸ್ಕರ್ಟ್ ಧರಿಸಬಾರದು. ಪ್ರವಾಸಿಗರು ಸಂಚರಿಸುತ್ತಿರುವ ಕಾರಿನ ಫೋಟೋ ತೆಗೆದು ಅವರ ಸ್ನೇಹಿತರಿಗೆ ಕಳುಹಿಸಬೇಕು'' ಎಂದು ಹೇಳಿದ್ದಾರೆ.
ಭಾರತ ಒಂದು ಸಂಸ್ಕೃತಿ ಹೊಂದಿರುವ ದೇಶವಾಗಿದ್ದು, ಇಲ್ಲಿನ ದೇವಸ್ಥಾನಗಳಲ್ಲಿ ವಿವಿಧ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ನೀವು ಬಟ್ಟೆ ಧರಿಸುವಾಗ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು.
ಆಗ್ರಾದಲ್ಲಿ ಪ್ರವಾಸಿಗರ ಸುರಕ್ಷತೆ ಹಾಗೂ ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ವಸ್ತ್ರ ಸಂಹಿತೆಯನ್ನು ಶಿಫಾರಸು ಮಾಡುತ್ತೀರಾ ಎಂದು ಕೇಳಿದ್ದಕ್ಕೆ, '' ನಾವು ವಿದೇಶಿಯರಿಗೆ ಎಂತಹ ಬಟ್ಟೆ ಧರಿಸಬೇಕು, ಏನು ಧರಿಸಬಾರದು ಎಂದು ಹೇಳುವುದಿಲ್ಲ. ಆ ಹಕ್ಕು ನಮಗಿಲ್ಲ. ಆದರೆ ವಿದೇಶಿಗರು ರಾತ್ರಿ ಹೊತ್ತಿನಲ್ಲಿ ಹೊರಗೆ ಓಡಾಡುವಾಗ ಜಾಗ್ರತರಾಗಿರಬೇಕು. ನಾವು ಬೇರೆಯವರು ಧರಿಸುವ ಬಟ್ಟೆಯನ್ನು ಬದಲಾಯಿಸುವ ಅಥವಾ ಅವರ ಯೋಚನಾ ವಿಧಾನವನ್ನು ತಿದ್ದುವ ಹಕ್ಕನ್ನು ಹೊಂದಿಲ್ಲ'' ಎಂದರು.
ಸಚಿವರು ಹೀಗೆ ಹೇಳಿದರೂ, ಮಹೇಶ್ ಶರ್ಮ ವಿರುದ್ಧ ಟ್ವಿಟ್ಟರ್ ನಲ್ಲಿ ಟೀಕೆಗಳ ಸುರಿಮಳೆಯೇ ಕೇಳಿಬಂದಿದೆ.
SCROLL FOR NEXT