ನವದೆಹಲಿ: ಮಹಾತ್ಮಗಾಂಧಿ ಹತ್ಯೆ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್'ಎಸ್ಎಸ್)ದ ಪಾತ್ರವಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಜತೆಗೆ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಆರ್‌ಎಸ್‌ಎಸ್, ಈ ಬಗ್ಗೆ ಅವರು ಲಿಖಿತ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.
ರಾಹುಲ್ ಗಾಂಧಿ ಅವರು ಈ ಸಂಬಂಧ ಕ್ಷಮೆಯಾಚಿಸಿದರೆ ಮಾತ್ರ ಪ್ರಕರಣ ಇತ್ಯರ್ಥವಾಗುತ್ತದೆ. ಇಲ್ಲದಿದ್ದರೆ ಇಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷನ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದಮ್ಮೆ ಹೂಡಿರುವ ಮಹಾರಾಷ್ಟ್ರ ಆರ್‌ಎಸ್‌ಎಸ್ ನಾಯಕ ರಾಜೇಶ್ ಮಹಾದೇವ್ ಕುಂಟೆ ಅವರು ಹೇಳಿದ್ದಾರೆ.
"ರಾಹುಲ್ ಗಾಂಧಿ ಅವರು ಇನ್ನು ಮುಂದೆ ತಾನು ಮಹಾತ್ಮ ಗಾಂಧಿಯನ್ನು ಕೊಂದದ್ದು ಆರ್‌ಎಸ್‌ಎಸ್ ಎಂದು ಮತ್ತೆ ಯಾವತ್ತೂ ಹೇಳುವುದಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಲಿಖಿತವಾಗಿ ಬರೆದುಕೊಡಬೇಕು, ಹಾಗಾದರೆ ಮಾತ್ರವೇ ಈ ವಿಷಯ ಇತ್ಯರ್ಥವಾಗಲು ಸಾಧ್ಯವಾದೀತು' ಎಂದು ಹೇಳಿದ್ದಾರೆ.
ರಾಹುಲ್ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದಮ್ಮೆಯನ್ನು ಹಿಂದೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಮಹಾತ್ಮ ಗಾಂಧಿಯನ್ನು ಕೊಂದದ್ದು ಆರ್‌ಎಸ್‌ಎಸ್ ಎಂಬ ಮಾತಿಗೆ ತಾನು ಬದ್ಧನಾಗಿರುವುದನ್ನು ಅವರು ತಮ್ಮ ಟ್ವೀಟ್ ಮೂಲಕ ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಸಾರಿದ್ದಾರೆ' ಎಂದು ಕುಂಟೆ ಹೇಳಿರುವುದಾಗಿ ಮೇಲ್ ಟುಡೇ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics