ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ಬಾಯಿಗೆ ಬಂದಂತೆ ಆಶ್ವಾಸನೆಗಳನ್ನು ನೀಡಿದ ರಾಜಕೀಯ ಪಕ್ಷಗಳ ವಿರುದ್ಧ ಚುನಾವಣಾ ಆಯೋಗ ಕೆಂಗಣ್ಣು ಬೀರಿದ್ದು, ಚುನಾವಣಾ ಪ್ರಣಾಳಿಕೆಯಲ್ಲಿನ ಆಶ್ವಾಸನೆ ನೀಡಲು ಹಣ ಎಲ್ಲಿಂದ ತರುತ್ತೀರಿ ಎಂದು ರಾಜಕೀಯ ಪಕ್ಷಗಳಿಂದ ಸ್ಪಷ್ಟನೆ ಕೇಳಿದೆ.
ಉಚಿತ ಟಿವಿ, ಮಿಕ್ಸಿ, ಹಸುಗಳು, ಕುರಿಗಳು, ಮನೆ, ನೀರು, ವಿದ್ಯುತ್, ಉಚಿತ ಇಂಟರ್ ನೆಟ್, ಹೆಚ್ಚು ಪಿಂಚಣಿ.....ಇಂತಹ ಆಶ್ವಾಸನೆಗಳು ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಸರ್ವೇ ಸಾಮಾನ್ಯ. ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಅಲ್ಲಿನ ರಾಜಕೀಯ ಪಕ್ಷಗಳು ಬಾಯಿಗೆ ಬಂದಂತೆ ಆಶ್ವಾಸನೆಗಳನ್ನು ನೀಡುತ್ತವೆ. ಇಂತಹ ಆಶ್ವಾಸನೆಗಳ ವಿರುದ್ಧ ಇದೀಗ ಅಲ್ಲಿನ ಚುನಾವಣಾ ಆಯೋಗ ಕೆಂಗಣ್ಣು ಬೀರಿದ್ದು ಈ ಸಂಬಂಧ ಆಡಳಿತಾರೂಢ ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷ ಸೇರಿದಂತೆ ವಿವಿಧ ಪ್ರಮುಖ ಪಕ್ಷಗಳಿಗೆ ಸ್ಪಷ್ಟನೆ ಕೋರಿ ನೋಟಿಸ್ ಜಾರಿ ಮಾಡಿದೆ.
ರಾಜಕೀಯ ಪಕ್ಷಗಳ ಚುನಾವಣಾ ಪೂರ್ವ ಆಶ್ವಾಸನೆಗಳ ಕುರಿತಂತೆ ಸಾರ್ವಜನಿಕರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ತಮಿಳುನಾಡು ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದ್ದು, ಚುನಾವಣಾ ಆಯೋಗದ ನೋಟಿಸ್ ಗೆ ಸ್ಪಂದಿಸಿರುವ ಕರುಣಾನಿಧಿ ನೇತೃತ್ವ ಡಿಎಂಕೆ ಪಕ್ಷ ತನ್ನ ಸ್ಪಷ್ಟನೆ ನೀಡಿದೆ. ಅಂತೆಯೇ ತನ್ನ ಆಶ್ವಾಸನೆಗಳಿಗೆ ತಾನು ಹೇಗೆ ಹಣ ಹೊಂಚುತ್ತಿದ್ದೆ ಎನ್ನುವುದನ್ನೂ ಕೂಡ ವಿವರಿಸಿದೆ. ಆದರೆ ಸಿಎಂ ಜಯಲಲಿತಾ ನೇತೃತ್ವದ ಆಡಳಿತಾರೂಢ ಎಐಎಡಿಎಂಕೆ ಪಕ್ಷ ಮಾತ್ರ ಆಯೋಗದ ಪ್ರಶ್ನೆಗಳಿಗೆ ಈ ವರೆಗೂ ಯಾವುದೇ ಉತ್ತರ ನೀಡಿಲ್ಲ.
ಇನ್ನು ಡಿಎಂಕೆ ಪಕ್ಷ ನೀಡಿರುವ ಉತ್ತರಗಳಿಗೆ ಅಸಂತುಷ್ಟಿ ವ್ಯಕ್ತಪಡಿಸಿರುವ ಆಯೋಗ ಎರಡೂ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಎರಡೂ ಪಕ್ಷಗಳ ಮುಖ್ಯಸ್ಥರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು, ಇಂತಹ ಆಶ್ವಾಸನೆಗಳು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಡಿ ಬರುತ್ತದೆ ಎಂದು ಹೇಳಿ ಪಕ್ಷಗಳಿಂದ ಸ್ಪಷ್ಟನೆ ಕೋರಿದೆ.